ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಎಕ್ಸಲೆಂಟ್ ವಿದ್ಯಾ ಸಂಸ್ಥೆ, ಟೆಂಪಲ್ ಟೌನ್ ರೋಟರಿ, ಶಿರ್ತಾಡಿ ಜವಾಹರ್ ವಿದ್ಯಾಸಂಘ, ಜೀವ ನಿಧಿ ಸಂಸ್ಥೆ, ರಾಷ್ಟ್ರ ಸೇವಿಕ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 19ರಂದು ಶಿರ್ತಾಡಿ ಜವಾಹರ್ ಲಾಲ್ ಪ್ರೌಢಶಾಲಾ ವಠಾರದಲ್ಲಿ ಸಸ್ಯ ಶ್ಯಾಮಲಾ ವನಮಹೋತ್ಸವ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಶಿರ್ತಾಡಿ ಪಂಚಾಯತ್ ಅಧ್ಯಕ್ಷೆ ಆಗ್ನೆಸ್ ಡಿಸೋಜಾ ದೀಪ ಬೆಳಗಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ಗಿಡಗಳೊಂದಿಗೆ ಸಂವಹಿಸಿದಷ್ಟೂ ಉತ್ತಮವಾಗಿ ಬೆಳೆಯುತ್ತದೆ. ಮಕ್ಕಳೇ ಸಸಿಗಳ ಜವಾಬ್ದಾರಿ ವಹಿಸಿರುವುದು ಉತ್ತಮ ಬೆಳವಣಿಗೆ. ಸಹಜ, ನೈಸರ್ಗಿಕ, ನೈಜ ಬೆಳವಣಿಗೆಯಲ್ಲಿ ಪರಿಸರವನ್ನು ರಕ್ಷಿಸಿದರೆ ಮಾತ್ರ ನಾವೂ ಜೀವಿಸಲು ಸಾಧ್ಯ ಇದೆ. ಕಂಡ ಕಂಡಲ್ಲಿ ಕಸ, ಪ್ಲಾಸ್ಟಿಕ್ ಎಸೆಯ ದಂತೆ ಜನರನ್ನು ಜವಾಬ್ದಾರಿಯುತ ಪ್ರಜೆಯನ್ನಾಗಿ ಬದಲಾಯಿಸುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ. ಅಂತಹ ಕಾರ್ಯ ಕೈಗೂಡಿದರೆ ಭೂತಾನ್ ನಂತಹ ಸ್ವಚ್ಛ ಸುಂದರ ದೇಶವನ್ನಾಗಿ ಭಾರತವನ್ನು ಬದಲಾಯಿಸಬಹುದು ಎಂದು ಆಶಿಸಿದರು. 

ಎನ್. ಎಸ್. ಎಸ್. ಅಧಿಕಾರಿ ತೇಜಸ್ವಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜ ಕೇಂದ್ರಿತ, ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದ ಸಾವಿರ ಗಿಡ ನೆಟ್ಟು ಪೋಷಿಸುವ ಕೆಲಸ ಮೂಡುಬಿದಿರೆ ಪರಿಸರದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು. 

ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ ಪ್ರತಿ ಗಿಡದ ಜವಾಬ್ದಾರಿಯುತ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ವೇದಿಕೆಯಲ್ಲಿ ವಿದ್ಯಾಸಂಘದ ಸದಸ್ಯ ಜನಾರ್ಧನ ಸೇರೆಗಾರ್, ಜೀವನಿಧಿ ಸಂಸ್ಥೆಯ ಶಶಿಧರ್, ರಾಷ್ಟ್ರ ಸೇವಿಕ ಸಮಿತಿಯ ಮೂಕಾಂಬಿಕ ಹಾಜರಿದ್ದರು. ಶ್ರೀಧರ ಭಟ್ ಅವರು ಸಮತಟ್ಟು ಗೊಳಿಸಿಕೊಟ್ಟ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ ಸ್ವಾಗತಿಸಿದರು. ಶಿಕ್ಷಕಿಯರಾದ ಸುಮಂಗಲ ಕಾರ್ಯಕ್ರಮ ನಿರ್ವಹಿಸಿದರು. ಮಾಲತಿ ವಂದಿಸಿದರು.