ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ನಾವೆಲ್ಲ ಒಂದು, ಭಾರತದಲ್ಲಿರುವವರೆಲ್ಲ ಹಿಂದು ಎನ್ನುವ ವಿಶಾಲ ಪರಿಕಲ್ಪನೆಯಲ್ಲಿ ಪುಸ್ತಕ ಆರಾಮಾಗಿ ಓದಿಸಿಕೊಂಡು ಹೋಗುವಂತೆ ಬರೆಯಲ್ಪಟ್ಟಿದೆ. 18 ಅಧ್ಯಾಯಗಳಲ್ಲಿ ಸಂಘದ ಉದ್ದೇಶವನ್ನು ವಿಸ್ತಾರವಾಗಿ, ಭೇದರಹಿತ ಸಮಾಜ ನಿರ್ಮಾಣದ ಮಹತ್ವವನ್ನು ತಿಳಿಸಲಾಗಿದೆ. ಪ್ರತಿಯೊಬ್ಬರ ಪ್ರತಿ ಪ್ರಶ್ನೆಗೂ ಸರ್ವವ್ಯಾಪಿ ಸರ್ವಸ್ಪರ್ಶಿ ಉತ್ತರ ಪುಸ್ತಕದಲ್ಲಿ ಲಭ್ಯವಿದೆ. ಗೋ ರಕ್ಷಾ, ರಾಷ್ಟ್ರ ರಕ್ಷಾ, ಸೇವೆಯೇ ಮೂಲಧ್ಯೇಯವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ರೂಪದಲ್ಲಿ ಜಗದ್ಜ್ಯಾಪಿತವಾಗಿದೆ ಎಂದು ರಾ.ಸ್ವ.ಸಂ.-100 ಶತಪಥ ಸಂಚಲನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಕರ್ನಾಟಕ ದಕ್ಷಿಣ ಪ್ರಾಂತ ಎ.ಬಿ.ವಿ.ಪಿ. ರಾಜ್ಯ ಅಧ್ಯಕ್ಷ ಡಾ. ರವಿ ಮಂಡ್ಯ ನುಡಿದರು.

ಅವರು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶಿಕಾರಿಪುರ ಈಶ್ವರ ಭಟ್ ಅವರ ಅರ್.ಎಸ್.ಎಸ್.ನ ನೂರು ವರ್ಷಗಳ ಚರಿತ್ರೆಯ ಪುಸ್ತಕವನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಬೆಂಗಳೂರು ವಿದ್ಯಾಭಾರತಿಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್ ಭಾಗವಹಿಸಿದ್ದು ಋಷಿ ಸಂಸ್ಕೃತಿಯ ರಾಷ್ಟ್ರ ಧರ್ಮದಲ್ಲಿ ಸಂಘಟಿತ ವ್ಯಾಯಾಮ ಅಗತ್ಯವಿದೆ. ವಿವಿಧ ಶಾಖೆಗಳ ಮೂಲಕ ಕೆಲಸ ಮಾಡುತ್ತಾ ಒಗ್ಗಟ್ಟಿನಿಂದ ಮುನ್ನಡೆಯುತ್ತಿದೆ. ಈ ಸಾಮರಸ್ಯದ ಸುಸಂಪನ್ನ ಅಖಂಡ ಭಾರತಕ್ಕಾಗಿ ಕೈ ಜೋಡಿಸೋಣ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಲೇಖಕ, ವಿಶ್ರಾಂತ ಶಿಕ್ಷಕ-ಪತ್ರಕರ್ತ ಶಿಕಾರಿಪುರ ಈಶ್ವರ ಭಟ್ ಮುಂದೆ ನಡೆಯುವ ಹಾದಿಯಲ್ಲಿ ಸಜ್ಜನ ಶಕ್ತಿಯು ದಾಪುಗಾಲಿಡಬೇಕು ಎಂದು ಕೇಳಿಕೊಂಡರು. ವೆಂಕಟರಮಣ ಕೆರೆಗದ್ದೆ ವಂದಿಸಿದರು.