ವಿದ್ಯಾಗಿರಿ,ಮೂಡುಬಿದಿರೆ:  ಅಲಕ್ಷ್ಯಕ್ಕೆ ಒಳಗಾಗುತ್ತಿರುವ ಹಲಸಿನ ಕುರಿತು ಇಂದಿನ ಪೀಳಿಗೆಗೆ ಅರಿವನ್ನು ಮೂಡಿಸುವ ಹಾಗೂ ಪ್ರದರ್ಶನದ ಮೂಲಕ ಅನುಭವ ನೀಡುವ ಈ ಮೇಳದ ಉದ್ದೇಶ ಸಾರ್ಥಕ ಎಂದು ಶಾಸಕ ಉಮಾನಾಥ.ಎ.ಕೋಟ್ಯಾನ್ ಹೇಳಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಮುಂಡ್ರುದೆ ಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಹಲಸು- ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ನೇತೃತ್ವದಲ್ಲಿ ಕೃಷಿಋಷಿ ಡಾ.ಎಲ್.ಸಿ. ಸೋನ್ಸ್ ಸ್ಮರಣಾರ್ಥ ಹಮ್ಮಿಕೊಂಡ ಹಲಸು ಮತ್ತು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಮತ್ತು ಕೃಷಿ ಪ್ರದರ್ಶನಗಳ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ‘ಸಮೃದ್ಧಿ’ಯ  ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲ ಕಳೆದಂತೆ ಆಹಾರ ಪದ್ಧತಿಯು ಬದಲಾಗುತ್ತಾ ಬಂದಿದೆ. ಆದರೆ, ನಮ್ಮಆರೋಗ್ಯ, ಬದುಕು ಹಾಗೂ  ಸಂಸ್ಕ್ರತಿಗೆ ಕೊಡುಗೆ ನೀಡಿದ ಹಣ್ಣುಗಳ ಪರಿಚಯವೇ ಮಾಸುತ್ತಿದೆ. ಅವುಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಮೇಳ ಶ್ಲಾಘನೀಯ ಎಂದರು.

ಇಲ್ಲಿ ಹಣ್ಣುಗಳ ಜೊತೆ ಅವುಗಳ ತಿನಿಸು, ಉಪಯೋಗಗಳನ್ನು ಪರಿಚಯಿಸಿರುವುದು ಶ್ರೇಷ್ಠ ಎಂದರು.  

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಡಾ.ಎಲ್.ಸಿ. ಸೋನ್ಸ್ ಅವರ ಸ್ಮರಣಾರ್ಥವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು, ಮೂಡುಬಿದಿರೆಯ ಎಲ್ಲ ಸಂಸ್ಥೆಗಳು, ರೈತ ಸಂಘಟನೆಗಳು, ಜಿಲ್ಲಾಡಳಿತ, ಆಧ್ಯಾತ್ಮಿಕ ಮತ್ತುಧಾರ್ಮಿಕ ಕೇಂದ್ರಗಳು, ಸಾಮಾಜಿಕ ಕ್ರೀಡಾ, ಸಾಂಸ್ಕೃತಿಕ ಹಾಗೂ ಭಾಷಾ  ಸಂಘಟನೆಗಳು ಮತ್ತು ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಮೂರು ದಿನಗಳು ಹಲಸು ವೈವಿಧ್ಯಮಯ ಹಣ್ಣುಗಳ ಆಹಾರೋತ್ಸವ ಮಹಾಮೇಳ ನಡೆದಿದೆ ಎಂದರು.

ವಿದೇಶದ ಹಲವಾರು ವೈವಿಧ್ಯಮಯ ತಳಿಗಳನ್ನು ನಮ್ಮಜಿಲ್ಲೆಗೆ ಪರಿಚಯಿಸಿದವರು ಡಾ. ಸೋನ್ಸ್. ಇವತ್ತು ನಮ್ಮ ಸುತ್ತಮುತ್ತ ಇರುವ  ಎಷ್ಟೋ  ಗಿಡಗಳಿಗೆ ಮೂಲ ಕಾರಣವೇಇವರು. ನಮ್ಮ ಮೂಡುಬಿದಿರೆಯನ್ನುಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದಕೀರ್ತಿ ಇವರಿಗೆ ಸಲ್ಲುತ್ತದೆ. ಕೃಷಿ ಋಷಿ ಡಾ.ಎಲ್.ಸಿ.ಸೋನ್ಸ್ ರವರ ಸ್ಮರಣೆಯಲ್ಲಿ 'ಸಮೃದ್ಧಿ ' ಹೆಸರಿನಿಂದ ಈ ಮಹಾಮೇಳ ನಡೆದಿದೆ ಎಂದರು. 

ಹಣ್ಣುಗಳು ನಮಗೆ ಹಲವಾರು ಸಂದರ್ಭಗಳಲ್ಲಿ ಬದುಕಲಿಕ್ಕೆ ಆಹಾರವಾಗಿವೆ. ಇದರ ಪರಿಚಯವೇ ಇಲ್ಲದ ಇಂದಿನ ಪೀಳಿಗೆಗೆ ವೈವಿಧ್ಯಮಯ ಹಣ್ಣುಗಳನ್ನು ಪರಿಚಯಿಸುವುದು ಮತ್ತು ಅದನ್ನು ಪ್ರದರ್ಶನ ಮಾಡಿ ಎಲ್ಲರಿಗೂ ಸಂಭ್ರಮ ನೀಡುವ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ ಎಂದರು.

ನಮ್ಮಲ್ಲಿರುವ ವೈವಿಧ್ಯತೆಯ ಕುರಿತು ನಮಗೆ ಗೌರವದ ಭಾವನೆ ಇರಬೇಕು. ಅದರೊಂದಿಗೆ ಅವುಗಳ ಪರಿಚಯ ಇರಬೇಕು. ಅವುಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು ಎಂದರು.

ಮಂಗಳೂರಿನ ಕೃಷಿಕ ಸಮಾಜದ ಅಧ್ಯಕ್ಷರು ಸಂಪತ್ ಸಾಮ್ರಾಜ್ಯ, ಮೂಡುಬಿದಿರೆಯ ರೋಟರಿ ಕ್ಲಬ್‍ ಅಧ್ಯಕ್ಷ ನಾಗರಾಜ್.ಬಿ, ಮೂಡುಬಿದಿರೆಯ ತುಳುಕೂಟದ ಅಧ್ಯಕ್ಷ ಧನಕೀರ್ತಿ ಬಲಿಪ ಮತ್ತು ಸಂಘಟನೆಯ ಸದಸ್ಯರುಗಳಾದ  ಸುಭಾಷ್ ಚಂದ್ರ ಚೌಟ, ರಾಜವರ್ಮ ಬೈಲಂಗಡಿ, ಆದಿರಾಜ ಇದ್ದರು. ಕಾರ್ಯಕ್ರಮವನ್ನು ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು.

ಬಾಕ್ಸ್

ಮೇಳ ಯಶಸ್ವಿಗೊಳಿಸಿದ ಜನತೆ: ಆಳ್ವ

ಪ್ರತಿ ದಿನ 15000ಕ್ಕೂ ಅಧಿಕ ಜನ ಈ ಮೇಳದಲ್ಲಿ ಪಾಲ್ಗೊಂಡಿದ್ದು, ಪ್ರತಿನಿತ್ಯ 50 ಲಕ್ಷಕ್ಕೂ ಅಧಿಕ ವ್ಯಾಪಾರ ನಡೆದಿದೆ. ಮಕ್ಕಳು, ಯುವಕ, ಯುವತಿಯರು, ಮಹಿಳೆಯರು ಪುರುಷರು ಮತ್ತು ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದವರು ಭಾಗಿಯಾಗಿದ್ದರು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದರು.

ವಿದ್ಯಾಗಿರಿ ಆವರಣದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಇಲ್ಲಿಗೆ ಆಗಮಿಸಿದ ಗ್ರಾಹಕರಿಗೂ, ವ್ಯಾಪಾರಿಗಳಿಗೂ ಈ ಮೇಳ ಖುಷಿಯನ್ನು ನೀಡಿದೆ. ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ ಎಂದರು.

ಈ ಮೇಳ ಕೇವಲ ಮೂಡುಬಿದಿರೆ ಜನತೆಗೆ ಮಾತ್ರ ಸೀಮಿತವಾಗಿರದೇ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಸೇರಿದಂತೆ ರಾಜ್ಯದ ಕೆಲವು ಭಾಗಗಳಿಂದ ಜನರು ಆಗಮಿಸಿದ್ದರು ಎಂದು ಮೇಳದ ಯಶಸ್ಸನ್ನು ಬಣ್ಣಿಸಿದರು.