ಕಾರ್ಕಳ, ಮೇ 31:  ಶಾಲಾ ಪ್ರಾರಂಭೋತ್ಸವವನ್ನು ತಳಿರು ತೋರಣ ಕಟ್ಟಿ ಮಕ್ಕಳಿಗೆ ಸಿಹಿ ತಿಂಡಿ ನೀಡಿ ಸ್ವಾಗತಿಸಬೇಕಾದ ದಿನ, ಆದರೆ ಇದಕ್ಕೆ ತದ್ವಿರುದ್ಧವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಡಂಬಳ ಮಿಯಾರು ಗ್ರಾಮದದಲ್ಲಿ ಇಲಾಖೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಧಿಕ್ಕಾರದ ಘೋಷಣೆಯೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ಬಿಸಿ ಮುಟ್ಟಿಸಿದರು. 

ಕಳೆದ ಎಂಟು ವರ್ಷಗಳಿಂದ  ಶಿಕ್ಷಕರನ್ನು  ನೀಡದೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಶಿಕ್ಷಣ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಶಾಲಾ ಶಿಕ್ಷಕರನ್ನು ನೀಡದೆ ಇದ್ದುದರಿಂದ  ಪರಿಣಾಮವಾಗಿ ಸುಮಾರು 56 ಮಕ್ಕಳಿದ್ದ ಈ ಶಾಲೆ, 18 ಮಕ್ಕಳನ್ನು ಹೊಂದಿದ್ದು ಅದರಲ್ಲಿ ಕೂಡ ಪ್ರಸ್ತುತ ಸಾಲಿನಲ್ಲಿ ಬಹುತೇಕ ವಿದ್ಯಾರ್ಥಿಗಳು ದೂರದ ಕಾರ್ಯಕ್ಕೆ ಹೋಗುವ ಭೀತಿ ಎದುರಾಗಿ ಸದ್ಯದಲ್ಲೇ ಶಿಕ್ಷಕರ ಕೊರತೆಯಿಂದ ಶಾಲೆ ಮುಚ್ಚುವ ಭೀತಿ ಉಂಟಾಗಿದೆ. ಪರಿಸರದಲ್ಲಿ ಸುಮಾರು 80 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮನೆಗಳಿದ್ದು ಅವರ ಮಕ್ಕಳು ಸಂಪೂರ್ಣವಾಗಿ ಈ ಶಾಲೆಯನ್ನೇ ಅವಲಂಬಿಸಬೇಕಾಗಿದೆ. ಇದಕ್ಕಾಗಿ ಇಂದು ಶಿಕ್ಷಕರನ್ನು ನೇಮಿಸುವ ತನಕ ಶಾಲೆಯನ್ನು ಆರಂಭಿಸಬಾರದೆಂದು ಸ್ಥಳೀಯರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ಮಿಯಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶೇಕ್ ಶಬ್ಬೀರ್ ಇವರು ವಹಿಸಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಅನ್ನು ಹಾಗೂ ಗ್ರಾಮದ ಸದಸ್ಯರು, ಉಪಾಧ್ಯಕ್ಷರಾದ ಶೇಖರ, ಹಿರಿಯರಾದ ಮಾಣಿಗ ಮೇರಾ ಪದ್ಮಾಕರ ಪೂಜಾರಿ ಮತ್ತಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.