ಮೂಡುಬಿದಿರೆ: ಕೃತಕ ಬುದ್ಧಿಮತ್ತೆಯ ಬೆಳವಣಿಗೆಯಿಂದ ಸಂವೇದನಾಶೀಲ ಜ್ಞಾನ ಅಥವಾ ಸೂಚ್ಯ ಜ್ಞಾನದ ಬಳಕೆ ಕ್ಷೀಣಿಸುತ್ತಿರುವ ಆತಂಕಕಾರಿ ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಶರತ್ ಅನಂತಮೂರ್ತಿ ನುಡಿದರು.
ಅವರು ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ 2025-26 ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ- ಸ್ವಾಗತ ಕಾರ್ಯಕ್ರಮ ‘ಆಳ್ವಾಸ್ ಆಗಮನ’ ದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ ಮೇಲೆ ಸಂಪೂರ್ಣ ಅವಲಂಬನೆಯಾದರೆ ಮನುಷ್ಯನ ಅನುಭವದಿಂದ ಕಲಿಯುವ ಶಕ್ತಿ, ಪ್ರಶ್ನಿಸುವ ಸ್ವಭಾವ, ಆಳವಾದ ಚಿಂತನೆ ಸೃಜಿಸಲಾರದು. ಎಐ ಅನ್ನು ಪ್ರೇರಕ ಶಕ್ತಿಯಾಗಿ ಬಳಸಿಕೊಳ್ಳುವುದು ಸೂಕ್ತ. ಅದು ನಮಗೆ ಹೊಸ ಆಲೋಚನೆಗಳನ್ನು ಹುಟ್ಟಿಸಬಲ್ಲದು, ಆದರೆ ಆಲೋಚನೆಗಳಿಗೆ ಜೀವ ತುಂಬಲು ಮನುಷ್ಯನಿಂದ ಮಾತ್ರ ಸಾಧ್ಯ ಎಂದರು.
ಮೂಲಭೂತ ಜ್ಞಾನವನ್ನು ಗಟ್ಟಿಗೊಳಿಸಿ ಮೂಲಭೂತ ಜ್ಞಾನ ಗಟ್ಟಿಗೊಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿ, ಸಮಸ್ಯೆಗಳನ್ನು ಎದುರಿಸುವ ಸಾಮಥ್ರ್ಯ ಹೆಚ್ಚುತ್ತದೆ. ಭವಿಷ್ಯದ ಸವಾಲುಗಳನ್ನು ನಿಭಾಯಿಸಲು ಸಾಮಾರ್ಥರಾಗುತ್ತಾರೆ. ಅಂತಹ ಶಿಕ್ಷಣದ ಅಗತ್ಯ ನಮ್ಮ ಮುಂದಿದೆ ಎಂದರು.
ವೈವಿಧ್ಯತೆಯನ್ನು ಪ್ರೀತಿಸಿ. ಪರಸ್ಪರ ಭಿನ್ನತೆಯನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಶಾಂತಿ, ಪ್ರೀತಿ, ಮತ್ತು ಪ್ರಗತಿ ಸಾಧ್ಯ. ಆಧುನಿಕ ಯುಗದಲ್ಲಿ ಹವ್ಯಾಸವು ಮಾನವನಿಗೆ ಸಮತೋಲನದ ಮನಸ್ಥಿತಿಯನ್ನು ನೀಡಬಲ್ಲದು. ಅದು ಮನಸ್ಸಿಗೆ ಸಂತೋಷ ನೀಡುವುದಷ್ಟೇ ಅಲ್ಲ, ವ್ಯಕ್ತಿತ್ವವನ್ನೂ ಸುಂದರಗೊಳಿಸುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಈ ಆವರಣದ ಮೂಲ ಶಕ್ತಿ ನಮ್ಮ ವಿದ್ಯಾರ್ಥಿಗಳು, ಪೋಷಕರು ಹಾಗೂ ಪಾಲಕರು. ನಮ್ಮ ನಿಜವಾದ ಬ್ರಾಂಡ್ ನಮ್ಮ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ತ್ಯಾಗ ಅತ್ಯಂತ ಪ್ರಮುಖ. ಅದನ್ನು ನಾವು ಸದಾ ಗೌರವಿಸಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ನೀವು ಆಯ್ಕೆ ಮಾಡಿದ ಕೋರ್ಸ್ ವಿಶೇಷತೆಯನ್ನು ತರಲಾರದು. ನಿಮ್ಮ ತೊಡಗಿಸಿಕೊಳ್ಳುವಿಕೆ ಮತ್ತು ಪರಿಶ್ರಮವೇ ನಾಳೆ ನಿಮ್ಮನ್ನು ಇತರರಿಂದ ಭಿನ್ನರನ್ನಾಗಿಸುತ್ತದೆ ಎಂದರು.
ಆಳ್ವಾಸ್ ಆಗಮನದದ ಹಿನ್ನಲೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹನ್ನೆರಡು ದಿನಗಳಲ್ಲಿ ಒಟ್ಟು 55ಕ್ಕೂ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಪ್ರಮುಖ ಜ್ಞಾನ ಶಾಖೆಗಳಲ್ಲಿ ತರಬೇತಿ ಹಾಗೂ ಕಾರ್ಯಗಾರ ನಡೆಯಲಿದೆ.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡೀಸ್ ಕಾಲೇಜಿನ ವೈಶಿಷ್ಟ್ಯತೆಯನ್ನು ಪ್ರಸ್ತುತ ಪಡಿಸಿದರು. ಕಾಲೇಜಿನ ರಿಸರ್ಚ್ ಡೀನ್ ಡಾ. ರಿಚರ್ಡ್ ಪಿಂಟೋ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು. ಡಾ. ಶಶಿಕುಮಾರ್ ಸ್ವಾಗತಿಸಿ, ಡಾ. ರಾಮ್‍ಪ್ರಸಾದ ವಂದಿಸಿದರು. ವಿದ್ಯಾರ್ಥಿನಿ ಶಾರ್ವರಿ ಶೆಟ್ಟಿ ನಿರೂಪಿಸಿದರು.