ಮೂಡುಬಿದಿರೆ: ಸಹಜೀವನದ ಸಂವೇಧನೆಯನ್ನು ಕಲಿಯುವುದರ ಜೊತೆಗೆ ನಿರ್ಧರಿತ ವ್ಯಕ್ತಿತ್ವ ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯು ಸಹಕಾರಿ ಎಂದು ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ ನುಡಿದರು. 

ಅವರು ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2025-26ರ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ರಾಷ್ಟ್ರೀಯ ಸೇವಾ ಯೋಜನೆ ಯುವಶಕ್ತಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಲು ಮಾರ್ಗದರ್ಶನ ನೀಡುವ ಶ್ರೇಷ್ಠ ವೇದಿಕೆ.  ಇದು ವಿದ್ಯಾರ್ಥಿಗಳಲ್ಲಿ ಸಾಂಘಿಕ, ಮಾನವೀಯ ಮತ್ತು ರಾಷ್ಟ್ರೀಯ ಬದ್ಧತೆಯನ್ನು ಬೆಳೆಸಲು ಪೂರಕ ವಾತವರಣ ಕಲ್ಪಿಸುತ್ತದೆ.  ಗಾಂಧೀಜಿಯ ಜನ್ಮ ಶತಮಾನೋತ್ಸವವನ್ನು ಸ್ಮರಿಸುವ ನೆಲೆಯಲ್ಲಿ 1969ರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು  ಪ್ರಾರಂಭವಾಯಿತು. ಇಂದು ಭಾರತದಲ್ಲಿ 50000 ಅಧಿಕ ಘಟಕಗಳೊಂದಿಗೆ 40 ಲಕ್ಷಕ್ಕೂ ಅಧಿಕ ಸ್ವಯಂಸೇವಕರು ಇದರ ಭಾಗವಾಗಿದ್ದಾರೆ.  

ಎನ್‍ಎಸ್‍ಎಸ್‍ನ ಲಾಂಛನ ಹೃದಯ ವೈಶಾಲ್ಯತೆಯನ್ನು ಪ್ರತಿನಿಧಿಸುತ್ತದೆ. ಯಾವುದೇ ಭಾಷೆ, ಜಾತಿ, ಧರ್ಮ, ಅಥವಾ ವಯಸ್ಸಿನ ಭೇದವಿಲ್ಲದೆ ಎಲ್ಲರಿಗೂ ಸಹಾಯ ಮಾಡುವ ಮನಸ್ಸನ್ನು ಬೆಳೆಸಲು ಎನ್‍ಎಸ್‍ಎಸ್ ಪ್ರೋತ್ಸಾಹಿಸುತ್ತದೆ.  ಇದು ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ಸ್ಪಂದನೆ ಮತ್ತು ಸಹಪಾಠಿಗಳೊಂದಿಗೆ ಒಡನಾಟ ಬೆಳೆಸುವ ಗುಣಗಳನ್ನು ಸಾರುತ್ತದೆ. ಭಾಂಧವ್ಯದ ಮೌಲ್ಯ ತಿಳಿಸುತ್ತದೆ ಎಂದರು.  

 ಹಳ್ಳಿಗಳ ದತ್ತು ಸ್ವೀಕಾರದ ಕಾರ್ಯ ಎನ್‍ಎಸ್‍ಎಸ್ ಮೂಲಕ ನಡೆಯಲಿ

ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಮೂಲಕ ಹಳ್ಳಿಗಳನ್ನು ದತ್ತು ಸ್ವೀಕರಿಸಿ, ಗ್ರಾಮೀಣ ಭಾಗದ ಜನತೆಗೆ ಆಧುನಿಕ ತಂತ್ರಜ್ಞಾನದ ಅರಿವು ನೀಡುವ ಕೆಲಸವಾಗಬೇಕಿದೆ. ಇಂದಿನ ಯುಗದಲ್ಲಿ ಆನ್ಲೈನ್ ಸೇವೆಗಳು, ಮೊಬೈಲ್, ಆ್ಯಪ್‍ಗಳು, ಒಟಿಪಿ ಪ್ರಕ್ರಿಯೆಗಳು ಸೇರಿದಂತೆ ಹಲವು ತಂತ್ರಜ್ಞಾನದ ಬಳಕೆ ಸಾಮಾನ್ಯವಾಗಿದೆ. ಆದರೆ ಹಳ್ಳಿಗಳಲ್ಲಿ ಇನ್ನೂ ಲಕ್ಷಾಂತರ ಜನರು ಇದನ್ನು ಬಳಸಲು ಶಕ್ತರಾಗಿಲ್ಲ.  ಇಂತಹ ಪರಿಸ್ಥಿತಿಯಲ್ಲಿ ಎನ್‍ಎಸ್‍ಎಸ್ ಸ್ವಯಂಸೇವಕರ ಸಹಾಯ ಪ್ರಯೋಜನಕಾರಿಯಾಗಬಲ್ಲದು.  ತಂತ್ರಜ್ಞಾನದ ಬಳಕೆ, ಆಧಾರ್ ಆಧಾರಿತ ಪಿಂಚಣಿ ಸೇವೆಗಳು, ವಿಶಿಷ್ಟಚೇತನರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯ, ವಿದ್ಯಾರ್ಥಿವೇತನದ ಅರ್ಜಿ ಪ್ರಕ್ರಿಯೆ, ವೃತ್ತಿ ಕೌಶಲ್ಯ ತರಬೇತಿ ಇತ್ಯಾದಿ ವಿಷಯಗಳಲ್ಲಿ ಜನತೆಗೆ ಮಾಹಿತಿ ನೀಡುವುದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಸ್ ಸ್ವಾಯತ್ತ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಕಲಿಕೆಗೆ ಸಾಕಷ್ಟು ಅವಕಾಶವಿದೆ. ಜ್ಞಾನರ್ಜನೆಯ ಜೊತೆಯಲ್ಲಿ  ಜೀವನಾನುಭವವನ್ನು ವೃದ್ಧಿಸುವಲ್ಲಿ ಇದು ಸಹಕಾರಿ. ಜೀವನ ಕೌಶಲ್ಯಗಳನ್ನು ಇಲ್ಲಿ ಕರಗತ ಮಾಡಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ನಿಕಟಪೂರ್ವ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಸಂತ ಎ ರನ್ನು ಸನ್ಮಾನಿಸಲಾಯಿತು.  

ಕಿರಣ್, ಸಂಜನಾ, ಸುಮಿತ್, ಸಮೀಕ್ಷಾ,  ಶಶಾಂಕ್, ಪವನ್,  ವರ್ಷಿಣಿ ಹಾಗೂ ಪ್ರಕಾಶ್ ನೂತನ ಪದಾಧಿಕಾರಿಗಳ ತಂಡದ ಸದಸ್ಯರಾಗಿ ವಿವಿಧ ಹುದ್ದೆಗಳ ಜವಾಬ್ದಾರಿಗಳನ್ನು ವಹಿಸಿಕೊಂಡರು.  ಕಿರಣ್ ಕಾರ್ಯಕ್ರಮ ನಿರೂಪಿಸಿ,  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುದೀಪ್ ಸ್ವಾಗತಿಸಿ, ಶಶಾಂಕ್ ವಂದಿಸಿದರು.   ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಅಕ್ಷತಾ ಪ್ರಭು ಘಟಕದ ಕಾರ್ಯದರ್ಶಿ ವೈಶಾಖ್,  ಜೊತೆ ಕಾರ್ಯದರ್ಶಿ ದ್ವಿತಿ ಇದ್ದರು.