ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ನ ಸಭೆ ಆಗಸ್ಟ್ 20 ರಂದು ನಡೆಯಿತು. ಸಭೆಗೆ ಅಗತ್ಯವಾಗಿ ಬರಬೇಕಿದ್ದ ಗಣಿ ಮತ್ತು ಭೂವಿಜ್ಞಾನ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಬಂದಿಲ್ಲದ ಬಗ್ಗೆ ಗ್ರಾಮಸ್ಥರು ಬಂದ ಅಧಿಕಾರಿಗಳನ್ನು, ಪಂಚಾಯತ್ ಅಧ್ಯಕ್ಷರುಗಳನ್ನು ತರಾಟೆಗೆ ತೆಗೆದುಕೊಂಡರು. ರೆವೆನ್ಯೂ ಇಲಾಖೆಯ ಅನಧಿಕೃತ ಕಲ್ಲು ಕೋರೆಗಳು ಆರು ಎಂದು ಗುರುತಿಸಲಾಗಿದ್ದರೂ, ಸಂಬಂಧಪಟ್ಟ ಮಾಹಿತಿಯನ್ನು ಒದಗಿಸಲು ವಿ.ಎ. ನಿರಾಕರಿಸಿದರು.
ಪೂರ್ಣಾವಧಿಯ ಗ್ರಾಮ ಲೆಕ್ಕಾಧಿಕಾರಿ ಇಲ್ಲದ ಕಾರಣದಿಂದಾಗಿ ಯಾವುದೇ ಅಭಿವೃದ್ಧಿಯ ಕೆಲಸಗಳು ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಕಳೆದ ಎರಡು ಗ್ರಾಮಸಭೆಗಳಲ್ಲಿಯೂ ಕೂಡ ಪುತ್ತಿಗೆ ಮಾರ್ಗವಾಗಿ ಬಾಕ್ಸೈಟ್ ಗೆ ಕಲ್ಲು ಹುಡಿ ಕೊಂಡೊಯ್ಯುವ 18 ಚಕ್ರದ ಲಾರಿಗಳ ವಿರುದ್ಧ ನಿರ್ಣಯಿಸಲಾಗಿತ್ತು. ಅಂತಹ ಲಾರಿಗಳ ಭರಾಟೆಯಿಂದ ಈಗಾಗಲೇ ಪಟ್ಲದ ಸಂಕವು ಕುಸಿಯುವ ಸ್ಥಿತಿಗೆ ಬಂದಿದೆ. ಈಗಾಗಲೇ ಕೆಲವಾರು ಬಾರಿ ಲಾರಿಗಳು ಹೂತು ದಿನಗಟ್ಟಲೆ ವಾಹನ ಸಂಚಾರ ನಿಂತಿದೆ. ಆದುದರಿಂದ ಅಂತಹ ಯಾವುದೇ ಲಾರಿಗಳಿಗೂ ಕೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ನಿರ್ಬಂಧವನ್ನು ವಿಧಿಸಬೇಕೆಂದು ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು. ಹಾಗೂ ಸಂಬಂಧಪಟ್ಟ ನಿರ್ಣಯದ ಪ್ರತಿಯನ್ನು ತಾಲೂಕು ಕೇಂದ್ರಕ್ಕೂ, ಪೊಲೀಸ್ ಇಲಾಖೆಗೂ ತಿಳಿಸಲಾಗುವುದು.
ಉಳಿದಂತೆ ಮೆಸ್ಕಾಂ, ಪಶು ಸಂಗೋಪನೆ, ಅರಣ್ಯ, ಪೋಲಿಸು, ಆರೋಗ್ಯ, ಇತ್ಯಾದಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಮಕ್ಕಳ ಮತ್ತು ಶಿಶು ಕಲ್ಯಾಣ ಅಧಿಕಾರಿಯವರು ನೋಡಲ್ ಅಧಿಕಾರಿಯಾಗಿ ಸಭೆಯನ್ನು ನಡೆಸಿಕೊಟ್ಟರು. ಪಂಚಾಯತ್ ಅಧ್ಯಕ್ಷೆ ರಾಧ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.