ಮಂಗಳೂರು : ಮಹಾನಗರ ಆಟೋ ರಿಕ್ಷಾ ಚಾಲಕರ ಸಂಘದ ಮಾಸಿಕ ಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಐವನ್ ಡಿ ಸೋಜರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಪದೇಪದೇ ಅಗೆದು ಹೊಂಡಗಳನ್ನು ನಿರ್ಮಿಸುತ್ತಿದ್ದು, ಸದ್ರಿ ಹೊಂಡಗಳಿಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ, ಒಳ ರಸ್ತೆಗಳಲ್ಲಿ ಹೊಂಡಗಳನ್ನು ಮುಚ್ಚದೇ ಹಾಗೇನೇ ಬಿಡುವುದರಿಂದ ಅವುಗಳಲ್ಲಿ ನೀರು ತುಂಬಿ, ಅನೇಕ ರಿಕ್ಷಾಗಳು, ದ್ವಿಚಕ್ರ ವಾಹನಗಳು ಬಿದ್ದು, ಅನೇಕರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ನಿನ್ನೆ ರಾತ್ರಿ ನಂತೂರಿನಲ್ಲಿ ನಡೆದ ಇಂತಹ ಘಟನೆಯಲ್ಲಿ ಓರ್ವ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಅಲ್ಲದೇ ಜ್ಯೋತಿ ಕೆ.ಎಂ.ಸಿ ಹಿಂಬದಿಯಿಂದ ಬಲ್ಮಠ ನ್ಯೂ ರೋಡ್ ಮೂಲಕ ಹಾದು ಹೋಗುವ ರಸ್ತೆಯು ತೀರಾ ನಾದುಸ್ಥಿತಿಯಲ್ಲಿದ್ದು, ದ್ವಿಚಕ್ರ, ತ್ರಿಚಕ್ರ ವಾಹನಗಳು ಚಲಿಸಲು ಅಸಾಧ್ಯವಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತೀಯಾಗಿ ಸುರಿಯುವ ಮಳೆಯಿಂದ ಮತ್ತು ರಸ್ತೆ ಅಗೆಯುವುದು ನಿರಂತರಗಾಗಿ ನಡೆಯುವುದರಿಂದ, ರಿಕ್ಷಾ ಚಾಲಕರು, ದ್ವಿಚಕ್ರ ವಾಹನ ಚಾಲಕರು ಚಲಿಸಲು ಅಸಾಧ್ಯವಾದ ಪರಿಸ್ಥಿತಿಯುಂಟಾಗಿರುವುದರಿಂದ ಈ ಬಗೆ ಕೂಡಲೇ ಕ್ರಮ ಕೈಗೊಳ್ಳದ್ದಿದ್ದಲ್ಲಿ, ರಸ್ತೆಗಳಲ್ಲಿ ಹೊಂಡಗಳನ್ನು ಮಾಡಿದ ಪ್ರದೇಶಗಳಿಗೆ ಭೇಟಿ ನೀಡಿ, ಪ್ರತಿಭಟನೆ ಮಾಡಲು ಮಂಗಳೂರು ಮಹಾನಗರ ಆಟೋ ರಿಕ್ಷಾ ಚಾಲಕರ ಸಂಘ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕರ ಮತ್ತು ವಾಹನ ಚಾಲಕರ ಬೇಡಿಕೆಯನ್ನು ನಿರ್ಲಕ್ಷಿಸುವುದರಿಂದ, ಹೋರಾಟವೇ ಅಂತಿಮವಾಗಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ವಸಂತ್ ಶೆಟ್ಟಿ, ಗಣೇಶ್ ಉಳ್ಳಾಲ್, ವಿಲ್ಫ್ರೆಡ್ ಫೆರ್ನಾಂಡಿಸ್, ಅನಿಲ್ ಲೋಬೊ, ಲೂವಿಸ್ ಡಿ ಸೋಜ, ರಾಜೇಶ್ ಪಿ.ವಿ, ಆಂಟೊನಿ ಡಿ ಸೋಜ, ಕ್ಲಿಫರ್ಡ್ ಡಿ ಸೋಜ, ಮೋಹನ್ ಬಿಲಾಲ್, ಉಮೇಶ್ ದೇರಳಕಟ್ಟೆ ಮುಂತಾದವರು ಉಪಸ್ಥಿತರಿದ್ದರು.