ಮಂಗಳೂರು, ಜೂ. 12: ರೈತರು ಹಾಗೂ ಉತ್ಪಾದಕರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ನಾನಾ ಮೇಳಗಳು ಮತ್ತು ವಸ್ತು ಪ್ರದರ್ಶನಗಳನ್ನು ಆಯೋಜಿಸುತ್ತಾ ಬಂದಿದೆ. ಕಳೆದ ದಶಕದಿಂದ ಹಣ್ಣುಗಳ ಉತ್ಸವ ಮತ್ತು ಹಲಸು ಮೇಳವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು, ಸಾರ್ವಜನಿಕರಿಂದ ವಿಶಿಷ್ಟ ಮೆಚ್ಚುಗೆಗಳನ್ನು ಗಳಿಸಿದೆ.

ಈ ಬಾರಿ ಹಣ್ಣುಗಳ ಮೇಳವನ್ನು ಜೂನ್ 14 ಮತ್ತು 15 ರಂದು ಬೆಳಗ್ಗೆ  9 ರಿಂದ ಸಂಜೆ 6 ಗಂಟೆಯವರೆಗೆ ಪಿಲಿಕುಳದ ಅರ್ಬನ್ ಹಾಥ್ ಮಳಿಗೆಗಳ ಸಂಕೀರ್ಣ, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಆಯೋಜಿಸಲಾಗಿದೆ. ಮೇಳದಲ್ಲಿ ದಕ್ಷಿಣ ಕನ್ನಡ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು, ಉತ್ಪಾದಕರು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ವಿವಿಧ ಸಂಸ್ಥೆಗಳು ಭಾಗವಹಿಸಿ ತಮ್ಮ ಮೌಲ್ಯಾಧಾರಿತ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶ ಹೊಂದಿದ್ದಾರೆ.

ಮೇಳದ ಪ್ರಮುಖ ಆಕರ್ಷಣೆಗಳು:- ಪ್ರಾದೇಶಿಕ ಹಾಗೂವಿಶಿಷ್ಟಮಾವು, ಹಲಸು ಮತ್ತು ಇತರ ಹಣ್ಣುಗಳು, ಹಣ್ಣುಗಳಿಂದ ತಯಾರಿಸಿದ ವಿವಿಧ ಆಹಾರಪದಾರ್ಥಗಳು, ಹಲಸಿನ ಜಿಲೇಬಿ, ಗಾರಿಗೆ, ಪಾನೀಯಗಳ ಪ್ರತ್ಯಕ್ಷ ಪ್ರದರ್ಶನ ಹಾಗೂ ಮಾರಾಟ, ಔಷಧೀಯ ಗಿಡಗಳು, ಕಸಿ ಗಿಡಗಳು, ಹಣ್ಣುಗಳಸಸಿಗಳು, ಸಾವಯವ ತರಕಾರಿ ಬೀಜಗಳು, ಗೃಹೋಪಯೋಗಿ ವಸ್ತುಗಳು ಮತ್ತು ಕರಕುಶಲ ಉತ್ಪನ್ನಗಳು.

ಈ ಮೇಳದಲ್ಲಿ ವಿವಿಧ ಸರಕಾರಿ, ಅರೆಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಹಭಾಗಿತ್ವ ವಹಿಸುತ್ತಿದ್ದು, ಸಾರ್ವಜನಿಕರಿಗೆ ನೇರವಾಗಿ ಉತ್ಪನ್ನಗಳನ್ನು ಖರೀದಿಸುವುದರೊಂದಿಗೆ ಬೆಳೆಗಾರರ ಶ್ರಮಕ್ಕೆ ನ್ಯಾಯ ದೊರಕಿಸುವ ಒಂದು ಸುಲಭ ವೇದಿಕೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಈ ಮೇಳವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.