ಮಂಗಳೂರು:  ಖ್ಯಾತ ಕವಿ ವೆಂಟೇಶ್ವರ ಗಟ್ಟಿಯವರ ಸತ್ಯನಾರಾಯಣ ನಗರ ಮಾಡೂರಿನಲ್ಲಿರುವ  ಮನೆಯಂಗಳದಲ್ಲಿ ಒಂದು ವಿಶಿಷ್ಠವಾದ ಸಾಹಿತ್ಯ ಗೋಷ್ಠಿ ಹಾಗೂ ಕವಿಗೋಷ್ಢಿಗಳು ದಿನಾಂಕ 27 ಎಪ್ರಿಲ್  24 ರಂದು ಯಶಸ್ವಿಯಾಗಿ ನೆರವೇರಿತು.

ರೇಖಾ ಸುದೇಶ್ ರಾವ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಅತಿಥೇಯ ವೆಂಕಟೇಶ್ವರ ಗಟ್ಟಿಯವರ ಸ್ವಾಗತ ಭಾಷಣದ ತರುವಾಯ ಮುಖ್ಯ ಅತಿಥಿಗಳಾದ  ಜೆಪ್ಪಿನ ಮೊಗೆರಿನ ಆದಿಮಾಯೆ ಸನ್ನಿಧಿಯ ಧರ್ಮದರ್ಶಿ  ದಯಾನಂದ ರವರಿಂದ ದೀಪ ಬೆಳಗಿಸಲ್ಪಟ್ಟು ವಿದ್ಯುಕ್ತವಾಗಿ ಉದ್ಘಾಟನೆ ಗೊಂಡಿತು.

ಅವರು ಆಶೀರ್ವದಿಸುತ್ತಾ ಕವಿರತ್ನ ಕಾಳಿದಾಸ ಇಲ್ಲಿ ನೆಲಸಿದಂತೆ ಭಾಸವಾಗುತ್ತದೆ. ಸಾಹಿತ್ಯ ಸೇವೆಯಿಂದ ಮಾನಸಿಕ‌ಮೌಲ್ಯ ವರ್ಧನೆಯಾಗುತ್ತದೆ. ಅಂತಹ ಭಾಗ್ಯ ಸರ್ವರಿಗೂ ಪ್ರಾಪ್ತವಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ನಾಗರಾಜ ಗಟ್ಡಿ, ಗಣೇಶ ಪ್ರಸಾದ್ ಜೀ ಹಾಗೂ , ರೇಮಂಡ್ ಡಿಕೂನಾ ತಾಕೊಡೆ ಯವರು ಶುಭಹಾರೈಕೆಯ ನುಡಿಗಳನ್ನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಪಂಗಳ ಈಶ್ವರ ಭಟ್ಟರು ವಾಲ್ಮೀಕಿಗೆ ಪ್ರಾಪ್ತವಾದ ಬೀಜ ಮಂತ್ರವೇ ಬೃಹತ್ ರಾಮಾಯಣವನ್ನು ಬರೆಸಿದಂತೆ, ತಂಪಾದ ಮಾವಿನ‌ನೆರಳೂ ಇಂಪಾದ ಕೋಗಿಲೆ ಗಾಯನವೂ ಪ್ರಾಪ್ತವಾಗುವ ಈ ಮನೆಯಂಗಳವು ಇಂದು ಸಾಹಿತ್ಯ ಪೂರ ಹರಿಸುವುದು ಸಂತಸದ ವಿಚಾರ ಎಂದರು.

ಅನಂತರ ನಡೆದ ಬಹುಭಾಷಾ ಕವಿಗೋಷ್ಢಿಯು ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಅವರು ಭಾಗವಹಿಸಿದ ಸರ್ವ ಕವಿಗಳ ಕವನದ ಉದ್ಧರಣೆ ಮಾಡುತ್ತಾ ಹಲವು ರೀತಿಯ ಹಲವು ಭಾವದ ಸಾಹಿತ್ಯ ಲಹರಿ ಎಲ್ಲರ ಮನೆಯಂಗಳದಲ್ಲೂ ನಡೆಯುವಂತಾಗಲಿ, ವೆಂಕಟೇಶ್ವರ ಗಟ್ಟಿಯವರ ಹಲವು ಮಾಸಗಳ ಪೂರ್ವದ ಕನಸಿಂದು ನನಸಾಗಿದ್ದು ಮುದ ನೀಡಿದೆ.ಮುಂದೆಯೂ ಇಂತಹ ಸಾಹಿತ್ಯ ಸೇವೆ ಮುಂದುವರಿಯುವಂತಾಗಲಿ ಎನ್ನುತ್ತಾ ಒಂದು ಸಕಾಲಿಕ ಗಜಕ್ ಮತ್ತು ಏಳೆ ಕವನ ವಾಚನ ಮಾಡಿದರು.

ಕವಿಗಳಾದ ಎಸ್ ಜೆ ಕುಂಪಲವರಿಂದ ಚಾಲನೆಗೊಂಡ ಕವಿಗೋಷ್ಠಿಯಲ್ಲಿ ಕವಯಿತ್ರಿ ರಶ್ಮಿ ಸನಿಲ್,ಸುಮಂಗಲಾ ಎಸ್ ದಿನೇಶ್ ಶೆಟ್ಟಿ, ಅರ್ಚನಾ ಬಂಗೇರ,ರೇಖಾ ಸುದೇಶ ರಾವ್,ಸೌಮ್ಯಾ ಆರ್ ಶೆಟ್ಟಿ,ಲತೀಶ್ ಸಂಕೊಳಿಗೆ, ರೇಮಂಡ್ ಡಿ ಕೂನಾ, ವೆಂಕಟೇಶ್ ಗಟ್ಟಿ ,ಚಂದ್ರಿಕಾ ಕೈರಂಗಳ ಮತ್ತಿತರರು ಬಹುವಿಧ ಬಹುಭಾಷಾ ಕವನ ವಾಚನ ಮಾಡಿದರು

ರಶ್ಮಿ ಸನಿಲ್ ಅವರು ಅತಿ ಸುಂದರವಾಗಿ ಕಾರ್ಯಕ್ರಮ ನಿರೂಪಿಸಿದರು

ಗಟ್ಟಿಯವರ ಚಿಕ್ಕ ಚೊಕ್ಕ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಭೋಜನಕ್ಕೆ ಮುಂದೂಡಲಾಯಿತು.