ಮಂಗಳೂರು: ತುಳುನಾಡು ನುಡಿಗೆ ಜೈನ ವಿದ್ವಾಂಸರು, ಜೈನ ರಾಜರು, ರಾಜ ಮನೆತನಗಳು, ಜಿನಾಲಯಗಳು ಚಾರಿತ್ರಿಕವಾದ ಕೊಡುಗೆಗಳನ್ನು ನೀಡಿವೆ. ಶಾಂತಿ ಸಾಮರಸ್ಯ ಹಾಗೂ ಸಾಮಾಜಿಕ ಸಮನ್ವಯತೆಗೂ ಜೈನರ ಕೊಡುಗೆ ಅನನ್ಯವಾದುದು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮೂಡಬಿದಿರೆ ಶ್ರೀ ಜೈನ ಮಠದಲ್ಲಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಸಹಭಾಗಿತ್ವದಲ್ಲಿ ಆಯೋಜಿಸಿದ ‘ತುಳುನಾಡು ನುಡಿಗೆ ಜೈನರ ಕೊಡುಗೆ’ ಎಂಬ ವಿಷಯದ ಬಗ್ಗೆ ಎಂ.ಕೆ. ರವೀಂದ್ರನಾಥ ದತ್ತಿ ನಿಧಿ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಮೂಡಬಿದಿರೆ ಶ್ರೀ ಜೈನ ಮಠದ ಜಗದ್ಗುರು ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾರ್ಯ ವರ್ಯ ಮಹಾ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಆಶೀವರ್ಚನ ನೀಡಿದರು. 

ಉಜಿರೆ ಎಸ್ .ಡಿ.ಎಂ. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್ ಅವರು ‘ತುಳುನಾಡು ನುಡಿಗೆ ಜೈನರ  ಕೊಡುಗೆ’ ಬಗ್ಗೆ ವಿಶೇಷ  ಉಪನ್ಯಾಸ ನೀಡಿದರು. ಮಹಾತ್ಮ ಗಾಂಧೀಜಿ ಅವರು ಅನುಷ್ಠಾನ ಮಾಡಿದ ಶಾಂತಿ, ಉಪವಾಸದ ವಿಚಾರಗಳು ಜೈನ ತೀರ್ಥಂಕರು ಬೋಧಿಸಿದ  ತತ್ವಗಳಾಗಿದ್ದವು . ತುಳುನಾಡಿನ  ಸಾಹಿತ್ಯ ಸಾಂಸ್ಕ್ರತಿಕ ಸಮೃದ್ಧಿಯಲ್ಲಿ ಜೈನರ ಕೊಡುಗೆ ಅನನ್ಯವಾದುದು ಎಂದು ಡಾ. ಸನ್ಮತಿ ಕುಮಾರ್ ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸಿದ್ದರು. 

ಕಾಲೇಜು ವಿದ್ಯಾರ್ಥಿಗಳ ಪರವಾಗಿ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸುತೇಜ ಇವರು ‘ತುಳುನಾಡು ನುಡಿಗೆ ಜೈನರ ಕೊಡುಗೆ’ ವಿಷಯದ ಬಗ್ಗೆ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ವೀಣಾ ಬಿ.ಆರ್. ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ನೆಲ್ಲಿಕ್ಕಾರು ಕ್ಷೇತ್ರದ ಮೋಕ್ತೇಸರ ವಿಮಲ್ ಕುಮಾರ್ ಬೆಟ್ಕೇರಿ , ನಾದ ನೂಪುರ ಟ್ರಸ್ಟ್ ಅಧ್ಯಕ್ಷ ಗೋವಿಂದ ವಂಡಾರು,  ಕಾರ್ಯದರ್ಶಿ  ಶುಭಾಶಯ  ಉಪಸ್ಥಿತರಿದ್ದರು. ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಶೆಟ್ಟಿ ವಂದಿಸಿದರು.