ಮಂಗಳೂರು: ಅಂತರಾಷ್ಟ್ರೀಯ ಚಂದ್ರ ದಿನಾಚರಣೆಯು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶನಿವಾರ ನಡೆಯಿತು.

ಮಣಿಪಾಲ ಮಾಹೆಯ ಸಂಶೋಧನಾ ಸ್ಕಾಲರ್ ಅತುಲ್ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಚಂದ್ರನ ಅನ್ವೇಷಣೆಯಲ್ಲಿ ಮನುಕುಲವು ಸಾಧಿಸಿದ ಪ್ರಮುಖ ಮೈಲಿಗಲ್ಲುಗಳನ್ನು ಮನವರಿಕೆ ಮಾಡುವುದರ ಜೊತೆಗೆ ಜನರ ದಿನನಿತ್ಯದ ಬದುಕಿನಲ್ಲಿ ಚಂದ್ರನ ಪ್ರಭಾವ ಬೀರುವ ಅಂಶಗಳು ಹಾಗೂ ಉಪಯೋಗಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು. ವಿಜ್ಞಾನ ಕೇಂದ್ರವು ಹಲವು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಿದ್ದು, ಇದರ ಸಂಪೂರ್ಣ ಸದುಪಯೋಗವನ್ನು ನಿರಂತರವಾಗಿ ಪಡೆದುಕೊಳ್ಳಬೇಕೆಂದು ತಿಳಿಸಿದರು. ನಂತರ ಚಂದ್ರನ ವಿವಿಧ ಆಯಾಮಗಳು, ಚಂದ್ರನ ಭ್ರಮಣೆ ಮತ್ತು ಪರಿಭ್ರಮಣೆಯ ಅವಧಿಗಳು ಮತ್ತು ಕುಳಿಗಳ ಬಗ್ಗೆ ಸಂರ್ಪೂಣವಾದ ಮಾಹಿತಿಯನ್ನು ಭಾಗವಹಿಸಿದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ವಿಶೇಷವಾದ ಕಿಟ್‍ಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿತೆಗಳ ಮುಖಾಂತರ ಚಂದ್ರನ ವಿವಿಧ ಆಯಾಮಗಳನ್ನು ಪ್ರಾಯೋಗಿಕವಾಗಿ ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಭಟ್ ಹಾಗೂ ತಂಡದವರು ನಡೆಸಿಕೊಟ್ಟರು. ತಾರಾಲಯದಲ್ಲಿ ‘ದಿ ಮೂನ್ʼ ಎಂಬ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. 

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ ಕುಮಾರ್ ಎನ್, ಮಾತನಾಡಿ, ಇಂತಹ ಕಾರ್ಯಕ್ರಮಗಳು ನಾವು ಚಂದ್ರನ ಮೇಲೆ ಮಾಡಿದ ಅನ್ವೇಷಣೆಗಳನ್ನು ಮೆಲುಕು ಹಾಕುವುದರ ಜತೆಗೆ ಮುಂದೆ ಕೈಗೊಳ್ಳಬಹುದಾದ ಸಂಶೋಧನೆಗಳಿಗೆ ಪ್ರೇರಣೆಯಾಗಲಿವೆ ಎಂದರು.  

ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ ಅಶೋಕ್ ಕೆ.ಆರ್ ಮಾತನಾಡಿ, ಪಿಲಿಕುಳವು ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ಶಕೀಲಾ ಹಾಗೂ ಯೆನೆಪೋಯ ಇನ್ಸಿಟ್ಯೂಟ್ ಆಫ್ ಆಟ್ರ್ಸ್, ಸೈನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್‍ನ ಸಹ ಪ್ರಾಧ್ಯಾಪಕಿ ಕೆ. ಮಾಯಾ ಕುಡ್ವ ಉಪಸ್ಥಿತರಿದ್ದರು. ಕೇಂದ್ರದ ಕ್ಯುರೇಟರ್ ಜಗನ್ನಾಥ ಸ್ವಾಗತಿಸಿ,ಇನ್ನೋವೇಶನ್ ಹಬ್‍ನ ಮೆಂಟರ್ ಸಹನಾ ವಂದಿಸಿ, ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.