ಮೂಡುಬಿದಿರೆ: ಲಕ್ನೋದಲ್ಲಿ ನಡೆಯುತ್ತಿರುವ ‘3ನೇ ಖೇಲೋ ಇಂಡಿಯಾ ಯುನಿರ್ವಸಿಟಿ ಗೇಮ್ಸ್-2022’ರ ಅಥ್ಲೆಟಿಕ್ಸ್, ವಾಲಿಬಾಲ್, ವೆಯಿಟ್ ಲಿಫ್ಟಿಂಗ್ ಹಾಗೂ ಮಲ್ಲಕಂಬದಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಅತ್ಯುತ್ತಮ ಸಾಧನೆ ಮಾಡಿದ್ದು, ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ 60 ಕ್ರೀಡಾಪಟುಗಳ ಪೈಕಿ 49 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. 


ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪೈಕಿ ಅಥ್ಲೆಟಿಕ್ಸ್‍ನ ಮಹಿಳಾ ವಿಭಾಗದಲ್ಲಿ ವಿಶ್ವವಿದ್ಯಾಲಯವು ಸತತ ಮೂರನೇ ಬಾರಿ ಚಾಂಪಿಯನ್ ಆಗಿದ್ದು, ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ 15 ಕ್ರೀಡಾಪಟುಗಳ ಪೈಕಿ 12 ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. 54 ಅಂಕಗಳೊಂದಿಗೆ ಮಹಿಳೆಯರು ಚಾಂಪಿಯನ್ ಪಟ್ಟ ಪಡೆದಿದ್ದರೆ, ರನ್ನರ್ ಅಪ್ ಸ್ಥಾನ ಪಡೆದ ಕೊಟ್ಟಾಯಂ ವಿಶ್ವವಿದ್ಯಾಲಯವು 35 ಅಂಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. 

ಪುರುಷರು ರಾಷ್ಟ್ರಮಟ್ಟದಲ್ಲಿ 5ನೇ ಸ್ಥಾನ ಪಡೆದಿದ್ದು, ವಿಶ್ವವಿದ್ಯಾಲಯ ಪ್ರತಿನಿಧಿಸಿದ 14 ಕ್ರೀಡಾಪುಟಗಳಲ್ಲಿ 13 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. 

ವಾಲಿಬಾಲ್‍ನಲ್ಲಿ ಬೆಳ್ಳಿಪದಕ ಪಡೆದಿದ್ದು, ವಿಶ್ವವಿದ್ಯಾಲವನ್ನು ಪ್ರತಿನಿಧಿಸಿದ 12 ಕ್ರೀಡಾಪಟುಗಳ ಪೈಕಿ 5 ಮಂದಿ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು. ವೇಟ್‍ಲಿಫ್ಟಿಂಗ್‍ನಲ್ಲಿ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಆಳ್ವಾಸ್ ಕಾಲೇಜಿನ 7 ಕ್ರೀಡಾಪಟುಗಳು ಪ್ರತಿನಿಧಿಸಿದ್ದು, ಮಹಿಳಾ ವಿಭಾಗದಲ್ಲಿ ಬೆಳ್ಳಿ ಹಾಗೂ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಪಡೆದಿದೆ. 

ಮಲ್ಲಕಂಬದ ಮಹಿಳಾ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 6ನೇ ಸ್ಥಾನ ಬಂದಿದ್ದು, ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಆಳ್ವಾಸ್ ಕಾಲೇಜಿನ 12 ವಿದ್ಯಾರ್ಥಿಗಳು  ಪ್ರತಿನಿಧಿಸಿದ್ದರು. ಈ ಬಾರಿ ಖೇಲೋ ಇಂಡಿಯಾದಲ್ಲಿ ವಿಶ್ವವಿದ್ಯಾಲಯವು 3 ಚಿನ್ನ, 7 ಬೆಳ್ಳಿ ಹಾಗೂ 5 ಕಂಚಿನ ಪದಕ ಮುಡಿಗೇರಿಸಿಕೊಂಡಿದೆ. 

ಆಳ್ವಾಸ್ ವಿದ್ಯಾರ್ಥಿಗಳ ಪದಕ ಪಟ್ಟಿ ಹೀಗಿದೆ:

ಬಸಂತಿ ಕುಮಾರಿ

ಆಳ್ವಾಸ್ ಕಾಲೇಜಿನ ಬಸಂತಿ ಕುಮಾರಿ (10,000 ಮೀ ಓಟ- ಪ್ರಥಮ(ಚಿನ್ನ), 5,000 ಮೀ. ಓಟ- ದ್ವಿತೀಯ(ಬೆಳ್ಳಿ) , 4*400 ರಿಲೇ -ದ್ವಿತೀಯ(ಬೆಳ್ಳಿ)), ಪೂನಂ ಸೋನುನೆ (10,000 ಮೀ ಓಟ-ತೃತೀಯ (ಕಂಚು), 5,000 ಮೀ. ಓಟ- ಪ್ರಥಮ(ಚಿನ್ನ)), ಪಲ್ಲವಿ ಪಾಟೀಲ್ (ಹೈಜಂಪ್- ಪ್ರಥಮ(ಚಿನ್ನ)), ಸ್ನೇಹಲತಾ ಯಾದವ್ (1,500 ಮೀ ಓಟ- ದ್ವಿತೀಯ(ಬೆಳ್ಳಿ), 4*400 ರಿಲೇ- ದ್ವಿತೀಯ(ಬೆಳ್ಳಿ)), ಅಂಜಲಿ ಸಿ. (100 ಮೀ ಹರ್ಡಲ್ಸ್- ದ್ವಿತೀಯ(ಬೆಳ್ಳಿ), ಟ್ರಿಪಲ್ ಜಂಪ್- ದ್ವಿತೀಯ(ಬೆಳ್ಳಿ)), ದೀಪಶ್ರೀ (4*400 ಮೀ. ರಿಲೇ- ದ್ವಿತೀಯ(ಬೆಳ್ಳಿ)), ಉಜ್ವಲ್ (ಡಿಸ್ಕಸ್ ಎಸೆತ- ತೃತೀಯ(ಕಂಚು)), ವಿಶೇಷ್  ಮೆಹ್ತಾ (1,500 ಮೀ ಓಟ- ತೃತೀಯ(ಕಂಚು)), ಉಪೇಂದ್ರ ಬಲಿಯಾನ್ (10,000 ಮೀ ಓಟ- ತೃತೀಯ(ಕಂಚು)), ಪ್ರಶಾಂತ್ ಸಿನ್ಹಾ (ವೇಟ್‍ಲಿಫ್ಟಿಂಗ್ –ತೃತೀಯ(ಕಂಚು)), ಲಕ್ಷ್ಮೀ (ವೇಟ್‍ಲಿಫ್ಟಿಂಗ್- ದ್ವಿತೀಯ(ಬೆಳ್ಳಿ).

ಪೂನಂ ಸೋನುನೆ

ಪಲ್ಲವಿ ಪಾಟೀಲ್

ಸ್ನೇಹಲತಾ ಯಾದವ್

ಅಂಜಲಿ ಸಿ.

ಬಾಕ್ಸ್

ಖೇಲೋ ಇಂಡಿಯಾದಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದ ಆಳ್ವಾಸ್‍ನ ಕ್ರೀಡಾಪಟುಗಳಿಗೆ ತಲಾ ರೂ.10 ಸಾವಿರ, ರೂ.7,500 ಹಾಗೂ ರೂ.5 ಸಾವಿರ ನೀಡುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಘೋಷಿಸಿದರು.