ದೇಶದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಮತ್ತು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಹೊಸಯುಗದ ಎನ್.ಬಿ.ಎಫ್.ಸಿ (NBFC) ಗಳಲ್ಲಿ ಒಂದಾದ ಕ್ಲಿಕ್ಸ್ ಕ್ಯಾಪಿಟಲ್ (Clix Capital), ಯುಬಿ ಕೋ. ಲೆಂಡ್ ಪ್ಲಾಟ್‍ಫಾರ್ಮ್ ಮೂಲಕ ಸಹ-ಸಾಲ ನೀಡಲು ಒಡಂಬಡಿಕೆಯನ್ನು ಮಾಡಿಕೊಂಡಿದೆ. ಈ ಪಾಲುದಾರಿಕೆಯು ಭಾರತದ ಜಿಡಿಪಿ ಮತ್ತು ಉದ್ಯೋಗದ ಬೆಳವಣಿಗೆಗೆ ಅತಿದೊಡ್ಡ ಕೊಡುಗೆ ನೀಡುತ್ತಿರುವ ಎಂಎಸ್‍ಎಂಇ ವಲಯಕ್ಕೆ ಸಾಲಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‍ನ ಮಾರ್ಗಸೂಚಿಗಳಿಗೆ ಅನುಗುಣವಾಗಿರುವ ಈ ಒಪ್ಪಂದಕ್ಕೆ ಇಂದು ಬೆಂಗಳೂರಿನಲ್ಲಿ ಸಹಿ ಹಾಕಲಾಯಿತು. ಸಮಾಜದ ಎಲ್ಲಾ ವರ್ಗದವರನ್ನು ಒಳಗೊಳ್ಳುವಂತೆ ಡಿಜಿಟಲ್ ವ್ಯವಸ್ಥೆಯ ಮೂಲಕ ಸುಸಜ್ಜಿತವಾಗಿ, ಕ್ಷಿಪ್ರವಾಗಿ ಗ್ರಾಹಕರಿಗೆ ಹಣಕಾಸು ನೆರವು ನೀಡುವ ಗುರಿಯನ್ನು ಈ ಎರಡೂ ಸಂಸ್ಥೆಗಳು ಹೊಂದಿವೆ. 

ಸಹಯೋಗದ ಕುರಿತು ಮಾತನಾಡಿದ ಕರ್ಣಾಟಕ ಬ್ಯಾಂಕ್‍ನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಹೆಚ್, "ಕ್ಲಿಕ್ಸ್ ಕ್ಯಾಪಿಟಲ್‍ನೊಂದಿಗೆ ಕರ್ಣಾಟಕ ಬ್ಯಾಂಕ್ ಮಾಡಿಕೊಂಡಿರುವ ಸಹ-ಸಾಲ ಒಡಂಬಡಿಕೆಯು ನಮ್ಮ ಬ್ಯಾಂಕಿನ ವ್ಯಾಪಕ ಶಾಖೆಗಳ ಮೂಲಕ ಉನ್ನತ ಉತ್ಪನ್ನ ಮತ್ತು ಗ್ರಾಹಕ ಸೇವೆಗಳೊಂದಿಗೆ ಎಂಎಸ್‍ಎಂಇ ವಲಯಗಳ ಡಿಜಿಟಲ್ ಸಾಲ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ವ್ಯವಸ್ಥೆಯಿಂದ ಎಂಎಸ್‍ಎಂಇ ವಲಯಕ್ಕೆ ಅತಿ ಸುಲಭವಾಗಿ ಆಕರ್ಷಕ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಕ್ಲಿಕ್ಸ್ ಕ್ಯಾಪಿಟಲ್ ಮತ್ತು ಕರ್ಣಾಟಕ ಬ್ಯಾಂಕ್ ಜಂಟಿಯಾಗಿ ಎಂಎಸ್‍ಎಂಇ ವಲಯದ ಅಗತ್ಯತೆಗಳನ್ನು ಪೂರೈಸಲಿದೆ. ದೇಶದ ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ಸಾಲ (ಮೈಕ್ರೋ ಕ್ರೆಡಿಟ್) ವಿಭಾಗಕ್ಕೆ ಪ್ರಚೋದನೆಯನ್ನು ನೀಡುವುದು ನಮ್ಮ ಗುರಿಯಾಗಿದೆ" ಎಂದು ನುಡಿದರು.

ಕರ್ಣಾಟಕ ಬ್ಯಾಂಕ್‍ನ ಎಕ್ಸೆಕ್ಯೂಟಿವ್ ಡೈರೆಕ್ಟರ್  ಶೇಖರ್ ರಾವ್ ಮಾತನಾಡಿ, "ವಿಸ್ತಾರವಾದ ಆರ್ಥಿಕ ಉತ್ಪನ್ನಗಳನ್ನು ಹಾಗೂ ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಸಮರ್ಪಕವಾಗಿ ಎಂಎಸ್‍ಎಂಇ ವಲಯಕ್ಕೆ ಒದಗಿಸಲು ಈ ಪಾಲುದಾರಿಕೆಯು ನಮಗೆ ಸಹಾಯ ಮಾಡಲಿದೆ" ಎಂದು ಹೇಳಿದರು.

ಕರ್ಣಾಟಕ ಬ್ಯಾಂಕ್‍ನೊಂದಿಗಿನ ಸಹ-ಸಾಲ ಒಪ್ಪಂದದ ಕುರಿತು ಪ್ರತಿಕ್ರಿಯಿಸಿದ ಕ್ಲಿಕ್ಸ್ ಕ್ಯಾಪಿಟಲ್‍ನ ಸಿಇಒ ರಾಕೇಶ್ ಕೌಲ್, "ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‍ನೊಂದಿಗೆ ಸಹ-ಸಾಲ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಉತ್ಸುಕರಾಗಿದ್ದೇವೆ. ಈ ಪಾಲುದಾರಿಕೆಯೊಂದಿಗೆ ನಮ್ಮ ತಂತ್ರಜ್ಞಾನ ಪರಿಣತಿ, ಸಾಲ ಸೌಲಭ್ಯವಂಚಿತ ವಿಭಾಗಗಳನ್ನು ಗುರುತಿಸುವ ಸಾಮಥ್ರ್ಯವು ಎಲ್ಲಾ ಎಂಎಸ್‍ಎಂಇ ವಲಯವನ್ನು ತಲುಪಲು ಅನುಕೂಲವಾಗಲಿದೆ. ಕರ್ಣಾಟಕ ಬ್ಯಾಂಕ್ ಜೊತೆಗಿನ ನಮ್ಮ ಪ್ರಯಾಣವು ಎಂಎಸ್‍ಎಂಇ ವಿಭಾಗಕ್ಕೆ ಹೊಸ ಆರ್ಥಿಕ ಚೈತನ್ಯವನ್ನು ನೀಡಲಿದೆ" ಎಂದು ನುಡಿದರು.