ಕರ್ಣಾಟಕ ಬ್ಯಾಂಕ್ ತನ್ನ ಕೃಷಿ ಬಂಡವಾಳವನ್ನು ವಿಸ್ತರಿಸಲು ಮತ್ತು ಬೃಹತ್ ಹೈನುಗಾರಿಕಾ ಉದ್ಯಮದಲ್ಲಿರುವ ಆರ್ಥಿಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಮರ್ಥವಾಗಿದೆ. ತಂತ್ರಜ್ಞಾನ ಮತ್ತು ಬ್ಯಾಂಕಿಂಗ್‍ನ ವಿವಿಧ ಸೇವೆಗಳ ಮೂಲಕ ಹೈನುಉದ್ಯಮದ ಸರಪಳಿಯಲ್ಲಿ ಆರ್ಥಿಕ ಸೇವೆಯನ್ನು ಎಲ್ಲರಿಗೂ ತಲುಪಿಸುವ ಮಹದುದ್ದೇಶವನ್ನು ಕರ್ಣಾಟಕ ಬ್ಯಾಂಕ್ ಹೊಂದಿದೆ. ಆ ಮೂಲಕ ಹೈನಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ನವೀನ ಆರ್ಥಿಕ ಉತ್ಪನ್ನಗಳನ್ನು ಆ ಕ್ಷೇತ್ರಕ್ಕೆ ತಲುಪಿಸುವ ಗುರಿಯನ್ನು ಹೊಂದಿದೆ. 

ಕರ್ಣಾಟಕ ಬ್ಯಾಂಕ್ ಈ ಉಪಕ್ರಮದ ಭಾಗವಾಗಿ, ಫಿನ್‍ಟೆಕ್ ಸಂಸ್ಥೆಯಾದ 'ಡಿಜಿವೃದ್ಧಿ (ಡಿಜಿವಿ)' ಸಹಭಾಗಿತ್ವದಲ್ಲಿ ಹಲವಾರು ಹಣಕಾಸು ಸೇವೆಗಳನ್ನು ಒದಗಿಸಲಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದೊಂದಿಗೆ (ಕೆಎಂಎಫ್) ಸಂಯೋಜಿತವಾಗಿರುವ ಗ್ರಾಮಾಂತರ ಹಾಗೂ ಇತರ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಈ ಸೇವೆಗಳು ಲಭ್ಯವಾಗಲಿವೆ. ಚಾಮರಾಜನಗರ ಹಾಲು ಒಕ್ಕೂಟಕ್ಕೆ (ಅಊಂಒUಐ) ಸಂಬಂಧಿಸಿದ ಹಾಲಿನ ಸೊಸೈಟಿಗಳಿಗೆ ಪ್ರಸ್ತುತ ಈ ಸೇವೆ ಲಭ್ಯವಾಗಿದೆ ಮತ್ತು ಶೀಘ್ರವಾಗಿ ಇತರ ಎಲ್ಲಾ ಹೈನು ಒಕ್ಕೂಟಗಳಿಗೆ ಇದನ್ನು ವಿಸ್ತರಿಸಲಾಗುವುದು.

ಈ ಕುರಿತು ಮಾತನಾಡಿದ ಬ್ಯಾಂಕ್‍ನ ಎಂಡಿ ಹಾಗೂ ಸಿಇಒ ಶ್ರೀ ಶ್ರಿಕೃಷ್ಣನ್ ಹೆಚ್, "ಕರ್ಣಾಟಕ ಬ್ಯಾಂಕ್ ಫಿನ್‍ಟೆಕ್ ಉಪಕ್ರಮಗಳನ್ನು ವೇಗಗೊಳಿಸುತ್ತಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪಾಲುದಾರರೊಂದಿಗೆ ಸಹಯೋಗವನ್ನು ಹೆಚ್ಚಿಸುತ್ತಿದೆ. ಗ್ರಾಹಕಸ್ನೇಹಿ ನವೀನ ಡಿಜಿಟಲ್ ತಂತ್ರಜ್ಞಾನದೊಂದಿಗೆ ಕರ್ಣಾಟಕ ಬ್ಯಾಂಕ್ ಸಮಾಜದ ಎಲ್ಲಾ ವರ್ಗದ ಜನರನ್ನು ತಲುಪುತ್ತಿದೆ. ‘ಡಿಜಿವೃದ್ಧಿ' ಸಂಸ್ಥೆಯೊಂದಿಗೆ ನಮ್ಮ ಬ್ಯಾಂಕು ಮಾಡಿಕೊಂಡಿರುವ ಒಪ್ಪಂದದಿಂದ ಹೈನು ಮಾರುಕಟ್ಟೆಗಳಿಗೆ ಮತ್ತು ಕೃಷಿಗ್ರಾಹಕರಿಗೆ ಹಲವಾರು ರೀತಿಯ ಅನುಕೂಲವಾಗಲಿದೆ” ಎಂದು ನುಡಿದರು.

ಉಪಕ್ರಮದ ಕುರಿತು ಮಾತನಾಡಿದ ಬ್ಯಾಂಕಿನ ಎಕ್ಸೆಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ "ಕೃಷಿ ಆಧಾರಿತ ಸಾಲಗಳನ್ನು ನೀಡುವುದರಲ್ಲಿ ಹಾಗೂ ವಿವಿಧ ಬ್ಯಾಂಕಿಂಗ್ ಉತ್ಪನ್ನಗಳನ್ನು ಕೃಷಿ ರಂಗಕ್ಕೆ ನೀಡುವುದರಲ್ಲಿ ಕರ್ಣಾಟಕ ಬ್ಯಾಂಕ್ ಪ್ರಾರಂಭದಿಂದಲೂ ಹೆಸರುವಾಸಿ. ನುರಿತ ಕೃಷಿಅಧಿಕಾರಿಗಳು ಕರ್ಣಾಟಕ ಬ್ಯಾಂಕಿನ ಗ್ರಾಹಕರಿಗೆ ಸೂಕ್ತ ಬ್ಯಾಂಕಿಂಗ್ ಮಾರ್ಗದರ್ಶನಗಳನ್ನು ನೀಡುತ್ತಿರುವುದಲ್ಲದೆ ಅವರ ಬ್ಯಾಂಕಿಂಗ ಚಟುವಟಿಕೆಗಳನ್ನು ಸುಲಭಗೊಳಿಸುತ್ತಿದ್ದಾರೆ. ‘ಡಿಜಿವೃದ್ಧಿ' ಸಂಸ್ಥೆಯೊಂದಿಗೆ ನಮ್ಮ ಬ್ಯಾಂಕು ಮಾಡಿಕೊಂಡಿರುವ ಒಪ್ಪಂದದಿಂದ ಎರಡೂ ಸಂಸ್ಥೆಗಳಿಗೂ ಅನುಕೂಲವಾಗಲಿದೆ. ಹೈನುಗಾರಿಕಾ ಕ್ಷೇತ್ರಕ್ಕೆ ನೂತನ ಬ್ಯಾಂಕಿಂಗ್ ಉತ್ಪನ್ನಗಳ ಮೂಲಕ ಕರ್ಣಾಟಕ ಬ್ಯಾಂಕ್ ಇನ್ನಷ್ಟು ನೆರವಾಗಲಿದೆ" ಎಂದು ನುಡಿದರು.

ಸಹಭಾಗಿತ್ವದ ಕುರಿತು ಮಾತನಾಡಿದ ಡಿಜಿವೃದ್ಧಿ ಸಂಸ್ಥಾಪಕ ಮತ್ತು ಸಿಇಒ  ರಾಘವನ್ ವೆಂಕಟೇಶನ್ ಅವರು, "'ಕರ್ಣಾಟಕ ಬ್ಯಾಂಕ್ ದಕ್ಷಿಣ ಭಾರತದಲ್ಲಿ ನಮ್ಮ ಸಂಸ್ಥೆಯ ಆದ್ಯತೆಯ ಬ್ಯಾಂಕಿಂಗ್ ಪಾಲುದಾರ'. ನಮ್ಮ 'ಡಿಜಿವಿ ಪೇ' ಉತ್ಪನ್ನವು ಡೈರಿ ರೈತರಿಗೆ ಪಾವತಿ ಸರಪಳಿಯನ್ನು ಸರಳಗೊಳಿಸುತ್ತದೆ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುವುದು ಸೇರಿದಂತೆ ತಮ್ಮ ಮೂಲಭೂತ ಬ್ಯಾಂಕಿಂಗ್ ಅಗತ್ಯಗಳಿಗೆ ಸಹಾಯ ಮಾಡುತ್ತದೆ. ಅದರಂತೆ ‘ಡಿಜಿ ಮನಿ' ಉತ್ಪನ್ನವು ಸಾಲಸೌಲಭ್ಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರೊಂದಿಗೆ ಇನ್ನೂ ನಮ್ಮ ಅನೇಕ ಆರ್ಥಿಕ ಉತ್ಪನ್ನಗಳು ಹೈನುಗಾರಿಕಾ ಉದ್ಯಮಕ್ಕೆ ಬೆಂಬಲವಾಗಿ ನಿಲ್ಲಲಿದೆ” ಎಂದು ನುಡಿದರು.