ಉಡುಪಿ ಮಾ 22: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿದೆ. ಜನತಾದಳದಲ್ಲಿ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿ, 90ರ ದಶಕದಲ್ಲಿ ದಳ ವಿದಳವಾದಾಗ ಯಾವುದೇ ಗುಂಪಿಗೂ ಸೇರದೆ, ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆದ್ದುಬಂದ ಹೆಗ್ಡೆ, ಕ್ಷೇತ್ರ ಪುನರ್ವಿಂಗಡಣೆಯ ವೇಳೆ ರಾಜಕೀಯ ಕಾರಣಗಳಿಗಾಗಿ ಬ್ರಹ್ಮಾವರ ಕ್ಷೇತ್ರವೇ ಇಲ್ಲವಾದ ಮೇಲೆ ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ನಲ್ಲಿದ್ದಾಗ ಲೋಕಸಭಾ ಉಪಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಜಯ ಗಳಿಸಿದರೂ ಮುಂದೆ ವಿಧಾನಪರಿಷತ್ತ್ ಚುನಾವಣೆಯ ಸಂದರ್ಭದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ 2015 ರಲ್ಲಿ ಕಾಂಗ್ರೆಸ್ ನಿಂದ ಉಚ್ಛಾಟಿತರಾದ ಬಳಿಕ ಬಿಜೆಪಿ ಪಕ್ಷ ಸೇರಿದರು. ಬಳಿಕ ರಾಜಯ್ಯ ಹಿಂದುಳಿದ ಆಯೋಗದ ಅಧ್ಯಕ್ಸ ಪಟ್ಟಕ್ಕೆ ನೇಮಕಗೊಂಡರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕವೂ ಆಯೋಗದ ಅವಧಿ ಮುಗಿದ ಬಳಿಕ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಎದುರಿಸಲಿದ್ದಾರೆ . 1999 ಮತ್ತು 2004 ರ ವಿಧಾನಸಭಾ ಚುನಾವಣೆಯಲ್ಲಿ ಬ್ರಹ್ಮಾವರ ಕ್ಷೇತ್ರದಿಂದ ತಾನು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಜಯಭೇರಿ ಬಾರಿಸಿದಾಗ ಎರಡೂ ಬಾರಿಯೂ ಅವರು ಬಿಜಿಪಿ ಸ್ಪರ್ಧಿಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಅವಾಗ ಅವರ ಎದುರಾಳಿಯಾಗಿದ್ದವರು ಕ್ರಮವಾಗಿ ಕಾಂಗ್ರೆಸ್ ನ ಸರಳ ಕಾಂಚನ್ ಮತ್ತು ಪ್ರಮೋದ್ ಮಧ್ವರಾಜ್ ಇದೀಗ ಮುರನೇ ಬಾರಿಗೆ ಇಬ್ಬರೂ ಪರಸ್ಪರ ಎದುರಾಳಿಗಳಾಗಿದ್ದಾರೆ.
ಪರಿಚಯ: ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದ ಡಿ .ಕೆ ಚಂದ್ರಶೇಖರ್ ಹೆಗ್ಡೆಯವರ ಪುತ್ರರಾದ ಕೊರ್ಗಿ ಜಯಪ್ರಕಾಶ್ ಹೆಗ್ಡೆ ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ರಾಜಕಾರಣಿ ಹಾಗೂ ಸಮಾಜಸೇವಕ. ಕುಂದಾಪುರ ತಾಲೂಕಿನ ಕೊರ್ಗಿಯಲ್ಲಿ 1952 ರ, ಅ 16 ರಂದು ಜನಿಸಿದ ಹೆಗ್ಡೆ ಬಿ.ಎ, ಎಲ್.ಎಲ್ .ಬಿ ಪದವೀಧರರು.
1972-78 ರ ಅವಧಿಯಲ್ಲಿ ವಿಜಯ ಬ್ಯಾಂಕ್ ನೌಕರರ ಯೂನಿಯನ್ ನ ಉಪಾಧ್ಯಕ್ಷರಾಗಿ ಬಳಿಕ ಅದ್ಯಕ್ಷರಾಗಿ ದುಡಿದ ಜಯಪ್ರಕಾಶ ಹೆಗ್ಡೆ, ರಾಜಕೀಯವನ್ನು ಪ್ರವೇಶಿಸಿದ್ದು ಅಖಿಲ ಭಾರತ ಯುವ ಜನತಾದಳದ ಪ್ರದಾನ ಕಾರ್ಯದರ್ಶಿಯಾಗುವ ಮೂಲಕ 1987 ರಲ್ಲಿ ಸ್ಪೇನ್ ನ ವೇಲೆನ್ಸಿಯಾದಲ್ಲಿ ನಡೆದ ಇಂಟರ್ ನ್ಯಾಶನಲ್ ಯೂನಿಯನ್ ಆಫ್ ಸೊಷಿಯಲಿಷ್ಟ್ ಯೂಥ್ ನ 'ಯುವಜನೋತ್ಸವ' ದಲ್ಲಿ ಭಾರತೀಯ ನಿಯೋಗದ ನೇತ್ರತ್ವ ವಹಿಸಿದ್ದರು.
ಯುವ ರಾಜಕೀಯ ನೇತಾರರ ಅಮೇರಿಕನ್ ಕೌನ್ಸಿಲ್ ಏರ್ಪಡಿಸಿದ್ದ ಪ್ರಜಾಪ್ರಭುತ್ವ ಸಮ್ಮೇಳನದಲ್ಲಿ ಹೆಗ್ಡೆ ಎರಡು ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. ಒಮ್ಮೆ 1986 ರ ಅಧ್ಯಕ್ಷೀಯ ಚುನಾವಣೆ ಸಂದರ್ಭ ಹಾಗೂ ಇನ್ನೊಮ್ಮೆ 1989ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾಮನ್ ವೇಲ್ತ್ ಯುವ ಕಾರ್ಯಕ್ರಮದಲ್ಲೂ ಅವರು ಭಾರತದ ಪ್ರತಿನಿಧಿಯಾಗಿದ್ದರು.
ಜನತಾದಳದ ಮೂಲಕ ರಾಜ್ಯದ ರಾಜಕೀಯ ರಂಗಕ್ಕೆ ಪ್ರವೇಶ ಪಡೆದ ಜಯಪ್ರಕಾಶ್ ಹೆಗ್ಡೆ, 1985 ಮತ್ತು 1989 ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನ ಬಿ.ಬಸವರಾಜ್ ಕೈಯಲ್ಲಿ ಸೋಲನ್ನು ಅನುಭವಿಸಿದ್ದರು. ಆದರೆ 1994 ರಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲಿ ಮೊದಲ ಜಯಗಳಿಸುವ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಮುಂದೆ ಅವರು ಭ್ರಹಾಂವರ ಖೇತ್ರ ಪುನರ್ವಿಂಗಡಣೆಯಲ್ಲಿ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುವವರೆಗೆ ಸತತ 11 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1994-99 ರ ಅವಧಿಯಲ್ಲಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿದ್ದರು. 1999 ರಲ್ಲಿ ಅವರು ಮತ್ತೆ ಇದೇ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿಲ್ಲದೇ 2004ರಲ್ಲಿ ನಡೆದ 12ನೆ ವಿಧಾನಸಭಾ ಚುನಾವಣೆಯಲ್ಲೂ ಸತತ ಮೂರನೇ ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ವಿಜಯ ಸಾದಿಸಿದ್ದರು.
2008 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಂದಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಹಾಲಾಡಿ ಶ್ರೀನಿವಾಸ ಶೆಟ್ಟರ ಕೈಯಲ್ಲಿ ಸೋಲನ್ನು ಅನುಭವಿಸಿದರು. ಬಳಿಕ 2009 ರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದ ಅವರು ಡಿ.ವಿ. ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರಿಂದ 2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರು ಬಿಜೆಪಿಯ ಸುನಿಲ್ ಕುಮಾರ್ ಅವರನ್ನು ಭರ್ಜರಿಯಾಗಿ ಸೋಲಿಸಿದ್ದರೂ, 2014ರ ಲೋಕ ಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಎದುರಾಳಿಯಾಗಿ ಸೋಲನ್ನು ಅನಿಭವಿಸಿದರು. ಕ್ರೀಡಾಪ್ರೇಮಿಯಾಗಿರುವ ಹೆಗ್ಡೆ ಯವರು ಬ್ರಹ್ಮಾವರದಲ್ಲಿ ಹಲವು ಕ್ರೀಡಾಕೂಟಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರವಲ್ಲದೆ, ಕ್ರಿಕೆಟ್ ಅಭಿಮಾನಿಯಾಗಿ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಶಿವಮೊಗ್ಗ ತಂಡದ ಮಾಲಕರು ಆಗಿದ್ದರು .