ಪುತ್ತೂರು:  ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇ಼ಷ ಶಿಬಿರಕ್ಕೆ ದ ಕ ಜಿ ಪ ಹಿ ಪ್ರಾ ಶಾಲೆ ಬಿಳಿಯೂರಿನಲ್ಲಿ ಇಂದು ಚಾಲನೆ ನೀಡಲಾಯಿತು. ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಸಶಕ್ತ ಭಾರತಕ್ಕಾಗಿ ಯುವಜನತೆ ಎಂಬ ಘೋ಼ಷಣೆಯೊಂದಿಗೆ ದಿನಾಂಕ 28-04-2024ರಿಂದ 04-05-2024 ರ ವರೆಗೆ ಏಳು ದಿನಗಳ ಕಾಲ ನಡೆಯಲಿರುವ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ವಾರ್ಷಿಕ ವಿಶೇ಼ಷ ಶಿಬಿರದ ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ   ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ವಹಿಸಿದ್ದರು.

ನೆರೆದಿದ್ದ ವಿದ್ಯಾಭಿಮಾನಿಗಳನ್ನು ಹಾಗೂ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅವರು “ಸಂತ ಫಿಲೋಮಿನಾ ಕಾಲೇಜು ಕಳೆದ ಆರು ದಶಕಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುತ್ತದೆ ಎಂಬುದಕ್ಕೆ ನಮ್ಮ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಶ್ರೇಣೀಕರಣ ಸಂಸ್ಥೆ ( ನ್ಯಾಕ್) ನಿಂದ  ಮೂರು ಬಾರಿ ದೊರೆತ ಎ ಗ್ರೇಡ್ ಮಾನ್ಯತೆ ಹಾಗೂ ಇತ್ತೀಚೆಗೆ ಅಂತರಾಷ್ಟ್ರೀಯ ಸಂಸ್ಥೆಯಾದ ಐಎಸ್ಒ 9001:2015 ಪ್ರಮಾಣೀಕರಣಗಳೇ ಸಾಕ್ಷಿ. ಗುಣಮಟ್ಟದ ಶಿಕ್ಷಣದೊಂದಿಗೆ ಭಾರತೀಯ ಕಲೆಗಳ ಬಗ್ಗೆ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ಓರ್ವ ಕ್ರೀಡಾಪಟುವು ಸ್ಪರ್ಧೆಗಳಲ್ಲಿ ಪದಕಗಳಿಸಬೇಕಾದರೆ ಹಲವಾರು ಹಂತಗಳನ್ನು ದಾಟಬೇಕಾಗುತ್ತದೆ. ಯಾವುದೇ ಪ್ರಶಸ್ತಿ ಅಥವಾ ಪದಕಗಳ ಹಿಂದೆ ಸಾಕಷ್ಟು ಶ್ರಮ ಇರುತ್ತದೆ. ಇಂತಹ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಶ್ರಮದ ಬೆಲೆ ತಿಳಿಯುತ್ತದೆ. ಜೀವನದ ಅನುಭವ ಪಡೆದಾಗ ಮಾತ್ರ  ಜೀವನ ಮೌಲ್ಯಗಳ ಬಗ್ಗೆ ತಿಳಿಯುತ್ತದೆ. ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯನ್ನು ಹೊಂದಿದ್ದಾಗ ಮಾತ್ರ ಅವರು ನಿಜವಾದ ಮಾನವರಾಗುವುದು” ಎಂದು ತಿಳಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ ದ ಕ ಜಿ ಪ ಹಿ ಪ್ರಾ ಶಾಲೆ ಬಿಳಿಯೂರಿನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಳಿನಿಯವರು  ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಥಳದಲ್ಲಿ ಶಿಬಿರ ಮಾಡುತ್ತಿರುವುದು ನಮ್ಮ ಊರಿಗೆ ಒಂದು ಸಂತಸದ ವಿಷಯ. ಇದಕ್ಕೂ ಮೊದಲು ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಶಿಬಿರವನ್ನು ಅಚ್ಚುಕಟ್ಟಾಗಿ ನಡೆಸಿರುತ್ತಾರೆ. ಅಂದು ನೀಡಿದ ಸಹಕಾರ ಇಂದು ಕೂಡ ನೀಡುತ್ತೇವೆ ಎಂದು ಆಶ್ವಾಸನೆ ನೀಡಿ  ಶಿಬಿರಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯ ಕುಮಾರ್ ಎಂ ರವರು ಸಂದರ್ಭೋಚಿತವಾಗಿ ಮಾತನಾಡಿ ಎನ್ ಎಸ್ ಎಸ್ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.   

ಇನ್ನೋರ್ವ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ  ಗ್ರಾಮ ಪಂಚಾಯತ್ ಸದಸ್ಯರಾದ ತಣಿಯಪ್ಪ ಪೂಜಾರಿ ಯವರು ಮಾತನಾಡಿ ಫಿಲೋಮಿನಾ ಕಾಲೇಜು ನಮ್ಮ ಗ್ರಾಮ ದಲ್ಲಿ ಶಿಬಿರ ಮಾಡಲು ಆಯ್ಕೆ ಮಾಡಿರುವುದು ಸಂತಸದ ವಿಷಯ ಎಂದು ಹೇಳಿದರು.  ತಮ್ಮ ಬಾಲ್ಯದ ಕ್ಷಣಗಳನ್ನು ನೆನೆಯುತ್ತಾ ನಮಗೂ ಇಂತಹ ಅವಕಾಶ ದೊರಕಬೇಕಿತ್ತು ಎಂದು ನುಡಿದರು. ಶಾಲೆಯ ಮುಖ್ಯಗುರುಗಳಾದ ಶೀಲಾ ಡಯಾನಾ ಮೋರಸ್ರವರು  ಈ ಏಳು ದಿನಗಳು ಎನ್ ಎಸ್ ಎಸ್ ಸ್ವಯಂಸೇವಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಊರವರಿಗೆ ಅವಿಸ್ಮರಣೀಯವಾಗಲಿ ಎಂದು ಹೇಳಿ ವಾರ್ಷಿಕ ಶಿಬಿರಕ್ಕೆ ಶುಭಕೋರಿದರು.

ಮಧುಶ್ರೀ ಮತ್ತು ಬಳಗ  ಪ್ರಾರ್ಥಿಸಿದರು. ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ವಾಸುದೇವ ಎನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುಷ್ಪಾ ಎನ್ ವಂದಿಸಿದರು. ಎನ್ ಎಸ್ ಎಸ್ ಕಾರ್ಯದರ್ಶಿ ತೃತೀಯ  ವಿದ್ಯಾರ್ಥಿನಿ ವೈಷ್ಣವಿ ಕೆ ಕಾರ್ಯಕ್ರಮ ನಿರೂಪಿಸಿದರು.  ಸಹ ಶಿಬಿರಾಧಿಗಳಾದ ಧನ್ಯ ಪಿ ಟಿ ಮತ್ತು ಚೈತ್ರ ಅವರು ಸಹಕರಿಸಿದರು. ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ  ರಾಧಾಕೃಷ್ಣ ಗೌಡ , ಸಹಾಯಕ ಪ್ರಾಧ್ಯಾಪಕರಾದ ಅಭಿಷೇಕ್ ಸುವರ್ಣ, ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಪೊನ್ನಪ್ಪ ಉಪಸ್ಥಿತರಿದ್ದರು.  

ಏಳು ದಿನಗಳ ಕಾಲ ನಡೆಯುವ ಈ ವಾರ್ಷಿಕ ವಿಶೇಷ ಶಿಬಿರವು ಪ್ರತಿದಿನ ಧ್ವಜಾರೋಹಣದ ಮೂಲಕ ಶುಭಾರಂಭಗೊಂಡು ಅವಲೋಕನದ ಮೂಲಕ ಸಂಪನ್ನಗೊಳ್ಳಲಿದೆ. ಕೆಮ್ಮಾಯಿಯ  ಆಯುರ್ವೇದ ಕ್ಲಿನಿಕ್ ನ ಡಾ| ಅನುಪಮ ಕೆ ಎಸ್ ರವರು ಶಿಬಿರದ ವೈದ್ಯಾಧಿಕಾರಿಯಾಗಿರುತ್ತಾರೆ. ಬಿಳಿಯೂರಿನ ಸಾಮ್ರಾಟ್ ಯುವಕ ಮಂಡಲ, ಸ್ಪಂದನಾ ಯುವತಿಮಂಡಳಿ, ಶ್ರೀ ವಿಷ್ಣು ಮಹಿಳಾ ಮಂಡಳಿ, ಸ್ವ-ಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ ಮತ್ತು ವಿಪತ್ತು ನಿರ್ವಹಣಾ ತಂಡಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸಹಭಾಗಿಗಳಾಗಿರುತ್ತಾರೆ. ಕಾಲೇಜಿನ ವಿದ್ಯಾರ್ಥಿವೃಂದ, ಶಿಕ್ಷಕ ರಕ್ಷಕ ಸಂಘ, ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಸಹಕಾರ ನೀಡಲಿದ್ದಾರೆ.