ಬಡಗಣ ಅಮೆರಿಕ ಖಂಡದ ಈಕ್ವೆಡಾರ್‌ನಲ್ಲಿ 6.8 ತೀವ್ರತೆಯ ಭೂಕಂಪ ಆಗಿದ್ದು, ಪೆರು ದೇಶದ ಉತ್ತರ ಭಾಗದಲ್ಲೂ ಸಾಕಷ್ಟು ಹಾನಿ ಉಂಟು ಮಾಡಿದೆ. ಪ್ರಾಥಮಿಕ ವರದಿಯಂತೆ ಈಕ್ವೆಡಾರ್‌ನಲ್ಲಿ ಕನಿಷ್ಠ 16 ಜನರು ಸಾವಿಗೀಡಾಗಿದ್ದು, 381 ಜನರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಕ್ವೆಡಾರ್‌ನ ಗಯಾಸ್ ಪ್ರಾಂತ್ಯದ ಗಯಾಸ್ ನಗರದ ಬಳಿ 66.4 ಕಿಲೋಮೀಟರ್ ಆಳದಲ್ಲಿ ನೆಲನಡುಕ ಕೇಂದ್ರ ಇರುವುದಾಗಿ ನೆಲನಡುಕ ಮಾಪನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಕ್ವೆಡಾರ್‌ನ ಎಲ್‌ಒರೊ ಮತ್ತು ಅಜಾವೊ ಪ್ರಾಂತ್ಯದಲ್ಲಿ ಸಾವುಗಳಾಗಿದ್ದು, ಗಾಯಾಳುಗಳು ಕೂಡ ಇಲ್ಲೇ ಹೆಚ್ಚು. ಸಾಕಷ್ಟು ಕಟ್ಟಡಗಳು ಉರುಳಿವೆ.