ಉಡುಪಿ ಜಿಲ್ಲೆಯ ಇನ್ನಂಜೆ ವಿಶ್ವೇಂದ್ರ ನಗರದ ಎಸ್.ವಿ. ಎಚ್. ವಿದ್ಯಾ ಸಂಸ್ಥೆಯ  ವಿದ್ಯಾರ್ಥಿಗಳಿಗೆ ಗ್ರಾಹಕ ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಬೆಂಗಳೂರು ಕ್ರಿಯೇಟ್ ಗ್ರಾಹಕ ಸಂಸ್ಥೆಯ ಸದಸ್ಯ, ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಜ್ಯ  ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಯವರು ತಿಳಿಸಿಕೊಟ್ಟರು. 

ಫೆಬ್ರವರಿ 10 ರಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿವಿಧ ತರಗತಿಗಳ ಪಾಠದಲ್ಲಿ ಬರುವ ಗ್ರಾಹಕ ಹಕ್ಕು ಮತ್ತು ಕರ್ತವ್ಯಗಳು ಬದುಕಿನಲ್ಲಿ ಎಷ್ಟು ಪ್ರಾಮುಖ್ಯ ಹಾಗೂ ಅವುಗಳ ತಿಳುವಳಿಕೆ ಇಲ್ಲದಿದ್ದರೆ ಎಷ್ಟು ತೊಂದರೆಗಳಿಗೆ ಒಳಗಾಗಿ ಕಷ್ಟ ಪಡಬೇಕಾಗುತ್ತದೆ ಎಂದು ಹಲವಾರು ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಟ್ಟರು. ಯಾವುದೇ ವಸ್ತುವನ್ನು ಕಳೆದುಕೊಂಡಾಗ ದಾಖಲೆಗಳ ಅಗತ್ಯದ ಮೌಲ್ಯ ತಿಳಿಯುತ್ತದೆ. ಆದುದರಿಂದ ಎಲ್ಲರೂ ದಾಖಲೆಗಳನ್ನು ಸಮರ್ಪಕವಾಗಿ ಇರಿಸಿಕೊಂಡು ಲಾಭ ಪಡೆಯಲು ತಿಳಿಸಿದರು. ಗ್ರಾಹಕ ಹಕ್ಕು, ಮಾಹಿತಿ ಹಕ್ಕು ಕಾಯ್ದೆಯ ಸದುಪಯೋಗವನ್ನು ಹೇಗೆ ಪಡೆಯಬಹುದಾಗಿದೆ ಎಂದು ವಿವರವಾಗಿ ತಿಳಿಸಿದರು. ವಿದ್ಯಾಸಂಸ್ಥೆಯ ಎಲ್ಲಾ ಅಧ್ಯಾಪಕರು, ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಮುಖ್ಯ ಶಿಕ್ಷಕಿ ಸುಷ್ಮಾ ಸ್ವಾಗತಿಸಿದರು. ಶಿಕ್ಷಕ ಸತೀಶ್ ನಾಯಕ್ ವಂದಿಸಿದರು.