ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗ್ರಂಥಾಲಯದಲ್ಲಿ ಇಂದು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕೇವಲ ಒಂದು ಕಾರ್ಯಕ್ರಮವಲ್ಲ. ಇದು ಪುಸ್ತಕಗಳು ಮತ್ತು ಗ್ರಂಥಾಲಯಗಳು ನಮ್ಮ ಜೀವನದ ಮೇಲೆ ಬೀರುವ ಆಳವಾದ ಪ್ರಭಾವಕ್ಕೆ ಮತ್ತು ಪುಸ್ತಕದ ಪುಟಗಳಲ್ಲಿ ಇರುವ ಅಪರಿಮತ ಜ್ಞಾನವನ್ನು ಹಾಗೂ ಅದರ ಪದರಸ್ತುತತೆಯನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಯಪಡಿಸಲು ಆಯೋಜಿಲಾದ ಕಾರ್ಯಕ್ರಮವಾಗಿದೆ.

ಕ್ಷಿಪ್ರ ತಾಂತ್ರಿಕ ಪ್ರಗತಿಯ ಈ ಡಿಜಿಟಲ್ ಯುಗದಲ್ಲಿ, ಗ್ರಂಥಾಲಯಗಳ ನಿರಂತರ ಪ್ರಸ್ತುತತೆಯು ಸಾಹಿತ್ಯದ ಕಾಲಾತೀತ ಮೌಲ್ಯಕ್ಕೆ ಸಾಕ್ಷಿಯಾಗಿದೆ.ಈ ಸಂದರ್ಭಕ್ಕಾಗಿ ಎಚ್ಚರಿಕೆಯಿಂದ ಆಯ್ದು ಸಂಗ್ರಹಿಸಲಾದ ನಮ್ಮ ಪುಸ್ತಕ ಪ್ರದರ್ಶನವು ಮಾನವ ಚಿಂತನೆಯ ವೈವಿಧ್ಯತೆ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಜನರನ್ನು ಏಕೀಕರಿಸುವ ಶಕ್ತಿಗೆ ಸಾಕ್ಷಿಯಾಗಿದೆ. ಗ್ರಂಥಾಲಯವೆಂದರೆ ಕೇವಲ ಪುಸ್ತಕಗಳ ಭಂಡಾರವಲ್ಲ. ಅದು ವಿದ್ಯಾರ್ಥಿಗಳನ್ನು ಬೌದ್ಧಿಕ ವಾಗಿ ಒಗ್ಗೂಡಿಸುವ ಕೇಂದ್ರವಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ಪ್ರೀತಿಯನ್ನು ಬೆಳೆಸುವಲ್ಲಿ, ಮತ್ತು ಸಮಾನ ಮನಸ್ಕರನ್ನು ಒಗ್ಗೂಡಿಸುವಲ್ಲಿ ಗ್ರಂಥಾಲಯಗಳು ಅಮೂಲ್ಯ ಪಾತ್ರವನ್ನು ವಹಿಸುತ್ತವೆ. ಪುಸ್ತಕಗಳ ಅದ್ಭುತ ಪ್ರಪಂಚದ ಮೂಲಕ ವಿದ್ಯಾರ್ಥಿಗಳೆಲ್ಲರೂ ಜ್ಞಾನಾನ್ವೇಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಓದು ಬಹಳ ಆನಂದದಾಯಕ ಹವ್ಯಾಸವಾಗಿದೆ. ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಹೆಚ್ಚುತ್ತವೆ.” ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರರವರು ಹೇಳಿದರು.

ನವಂಬರ್ 14 ರಿಂದ ನವಂಬರ್ 20 ರವರೆಗೆ ಭಾರತದಲ್ಲಿ ಆಚರಿಸಲ್ಪಡುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಕಾಲೇಜು ಗ್ರಂಥಾಲಯ ಗ್ರಂಥಾಲಯದಲ್ಲಿ ನವಂಬರ್ 15 ರಿಂದ 20 ರವರೆಗೆ ಆಯೋಜಿಸಿದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತಾಡಿದರು. ಗ್ರಂಥಾಲಯದಲ್ಲಿ ನಮ್ಮ ಜೀವನದ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ಪುಸ್ತಕಗಳ ಆಸ್ತಿಯೇ ಇದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಉಪದೇಶಿಸಿದರು.
ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಶ್ರೀ ಅಬ್ದುಲ್ ರಹ್ಮಾನ್ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕರಾದ ಮನೋಹರ್ ಎಸ್.ಜಿ. ವಂದಿಸಿದರು. ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೇಮಲತಾ ಕೆ ರವರು ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ(ಐಕ್ಯೂಎಸಿ) ನಿರ್ದೇಶಕರಾದ ಡಾ. ಮಾಲಿನಿ ಕೆ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಾಜೇಶ್ವರಿ ಎಂ, ವಿದ್ಯಾರ್ಥಿ ಸಂಘದ ಸದಸ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.