ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ 

ನಾಗ ಪಂಚಮಿಯ ತರುವಾಯ ಬರುವ ಹಿಂದೂಗಳ ಉತ್ಸವವೇ ರಕ್ಷಾ ಬಂಧನ ಹಾಗೂ ಉಪಾಕರ್ಮ. ಅಕ್ಕ ತಂಗಿಯರು ಅಣ್ಣ ತಮ್ಮ ರೊಂದಿಗೆ ನಾಗ ತನು ಎರೆದು ಸಂಭ್ರಮಿಸಿದಂತೆಯೇ ರಕ್ಷಾ ಬಂಧನದಲ್ಲೂ ಕೂಡಾ  ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೆ ರಕ್ಷಣೆಯ ಭರವಸೆಯನ್ನು ಹೇಳುವ ಸಂಭ್ರಮ. ಅದಕ್ಕಾಗಿ ರಾಖಿಯನ್ನು ಕಟ್ಟಿ ಸಡಗರ ಪಡಲಾಗುತ್ತದೆ. ಆದರೆ ರಕ್ಷಾ ಬಂಧನದ ನೈಜ ಉದ್ದೇಶವೇ ಬೇರೆ.

ತಂದೆ ತಾಯಿಯರನ್ನು ಕಳಕೊಂಡ ಅಕ್ಕ ತಂಗಿಯರಿಗೆ ಸಾಂತ್ವನವನ್ನು ಅಣ್ಣ ತಮ್ಮಂದಿರು ಹೇಳುತ್ತಾರೆ. ಗಂಡನಿಂದ ಪರಿತ್ಯಕ್ತ ಅಥವಾ ವಿಧವೆಯಾಗಿ ಮಕ್ಕಳಿಲ್ಲದ ಅಕ್ಕ ತಂಗಿಯರಿಗೆ ಮುಂದಿನ ಬದುಕಿಗೆ ಆಸರೆಯಾಗಿ ನಿಲ್ಲುವ ಭರವಸೆ ನೀಡುವದೇ ರಕ್ಷಾ ಬಂಧನದ ನೈಜ ಉದ್ದೇಶ. ಈ ಭರವಸೆಯೇ ಆಕೆಯ ಅನಾಥ ಬದುಕಿಗೆ ಬೆಂಬಲವಾಗಿ ಉಳಿದು ಅಣ್ಣ ತಮ್ಮಂದಿರ ರಕ್ತ ಸಂಬಂಧಕ್ಕೆ ಹೆಚ್ಚಿನ ಮೌಲ್ಯ ಉಳಿಯಲು ಕಾರಣವಾಗುತ್ತದೆ.

ರಕ್ಷಾ ಬಂಧನ ಶ್ರಾವಣ ಹುಣ್ಣಿಮೆಯ ದಿನ ಆಚರಿಸಲ್ಪಡುತ್ತದೆ. ಅದೇ ದಿನ ಉಪಾಕರ್ಮವೂ ಆಚರಿಸಲಾಗುತ್ತದೆ. ಎಲ್ಲಾ ದ್ವಿಜರೂ ಪವಿತ್ರ ಜನಿವಾರವನ್ನು ನೂತನಕ್ಕೆ ಬದಲಾಯಿಸಿ ಪಾರಮಾರ್ಥಿಕ ಬದ್ಧತೆ ಹೆಚ್ಚಿಸಿಕೊಳ್ಳುತ್ತಾರೆ. ಮಹಾರಾಷ್ಟ್ರದಲ್ಲಿ ರಾಖಿ ಪೂರ್ಣಿಮೆ ಎಂದು. ಉತ್ತರ ಭಾರತದಲ್ಲಿ ಗಾಳಿ ಪಟವನ್ನು ಹಾರಿಸಿ ಸಂಭ್ರಮಿಸುವರು. ಪಶ್ಚಿಮ ಬಂಗಾಳದಲ್ಲಿ ಜೂಲನ್ ಪೂರ್ಣಿಮೆ ಎಂದು ಆಚರಿಸುತ್ತಾರೆ. ಅಂದು ಕೃಷ್ಣ ರಾಧೆಯರನ್ನು ಪೂಜಿಸಿ ಅಕ್ಕ ತಂಗಿಯರು ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟಿ ಹರಸುತ್ತಾರೆ. ನೇಪಾಳದಲ್ಲಿ ಜನೈ ಪೂರ್ಣಿಮಾ ಅಥವಾ ರಿಶಿ ತರ್ಪಣಿ ಎಂದು ರಕ್ಷಾ ಬಂಧನವನ್ನು ಕರೆದು ಪವಿತ್ರ ಜನಿವಾರವನ್ನು ನೇಪಾಳದ ಹಿಂದೂ,ಬೌದ್ಧರು ಆಚರಿಸುತ್ತಾರೆ.