ಮಂಗಳೂರು : 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬುಧವಾರ ಆಗಸ್ಟ್ 10ರಂದು, ಪಾಂಡೇಶ್ವರದ ನೆಹರೂ ಪ್ರತಿಮೆಯಿಂದ ಆರಂಭಿಸಿ ಗಡಿಯಾರ ಗೋಪುರ, ಪಿವಿಎಸ್ ಎಂದು ಗಾಂಧೀಜಿ ಮೂರ್ತಿಯವರೆಗೆ ಪಕ್ಷಾತೀತವಾಗಿ ಸ್ವಾತಂತ್ರ್ಯ ನಡೆಸುವುದಾಗಿ ಮಾಜೀ ಶಾಸಕ ಜೆ. ಆರ್. ಲೋಬೋ ಹೇಳಿದರು.

ನೆಹರೂ ಮತ್ತು ಗಾಂಧೀಜಿ ಪ್ರತಿಮೆಗಳಿಗೆ ಮಾಲಾರ್ಪಣೆ ಮೂಲಕ ಅವರ ಸ್ವಾತಂತ್ರ್ಯ ಹೋರಾಟ, ಅವರೊಂದಿಗೆ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ನೆನಪಿಸಿ ಈ ನಡಿಗೆ. ನೆಹರುರವರು ಒಂಬತ್ತು ಬಾರಿ ಜೈಲಿಗೆ ಹೋಗಿದ್ದರು. ಈಗಿನವರಿಗೆಲ್ಲ ಶಾಸ್ತ್ರಿ, ಪಟೇಲ್, ಜಗಜೀವನರಾಂ, ಮನಮೋಹನ್ ಸಿಂಗ್ ಎಲ್ಲರ ಹೋರಾಟಕ್ಕೆ ಇಲ್ಲಿ ನಮನ ಎಂದು ಲೋಬೋ ಹೇಳಿದರು.

ಹರ್ ಘರ್ ತಿರಂಗಾ ಯೋಜನೆ ಸಂತೋಷ. ಆದರೆ ಬಾವುಟದ ಗೌರವ ಕಾಪಾಡುವಂತೆ ಈ ಕಾರ್ಯಕ್ರಮಗಳು ನಡೆಯಬೇಕು. ರಾಷ್ಟ್ರ ಧ್ವಜಕ್ಕೆ ಯಾವ ರೀತಿಯ ಅವಮಾನವೂ ಆಗಬಾರದು. ಬಾವುಟದ ಅಳತೆ, ಬಣ್ಣ ಎಲ್ಲದಕ್ಕೂ ಅರ್ಥ, ಗೌರವ ಇದೆ. ಕಾಂಗ್ರೆಸ್ ಅದನ್ನು ಕಾಪಾಡಿದೆ. ಈಗಿನ ಸರಕಾರವೂ ಸಹಕರಿಸಬೇಕು ಎಂದೂ ಲೋಬೋ ಹೇಳಿದರು.

ಈ ಸರಕಾರವು ನಿರಂಕುಶದತ್ತ ಸಾಗಿದೆ ಆದರೆ ರಾಷ್ಟ್ರ ಭಕ್ತಿಯಲ್ಲಾದರೂ ಸಾಚಾ ಆಗಿ ನಡೆದುಕೊಳ್ಳಲಿ. ಬೆಳಿಗ್ಗೆ ಒಂಬತ್ತೂವರೆಗೆ ಪಾಂಡೇಶ್ವರದಿಂದ ಆರಂಭ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಾಹುಲ್ ಹಮೀದ್, ಪ್ರಕಾಶ್ ಸಾಲಿಯಾನ್, ಹೈದರ್, ಲಕ್ಷ್ಮಣ್, ಸುನೀಲ್ ಪೂಜಾರಿ, ಪ್ರೇಮನಾಥ, ರಾಕೇಶ್, ಟಿ. ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.