ಮಂಗಳೂರು: NEP 2020 ಅಳವಡಿಕೆಯನ್ನು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರದ್ದು ಪಡಿಸದೆ, ಮುಂದುವರೆಸುವಂತೆ ಅಗ್ರಹಿಸಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆದಿದ್ದು, ಈ ಅಭಿಯಾನದ ಜನಾಭಿಪ್ರಾಯದ ಕುರಿತಂತೆ ದಿನಾಂಕ 17.01.2024 ರಂದು ಮಂಗಳೂರಿನಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯ ವಿವರ.

ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್, ಶೈಕ್ಷಣಿಕ ವಿಷಯಾಸಕ್ತರನ್ನೊಳಗೊಂಡ ವೇದಿಕೆ. ಶಿಕ್ಷಣ ಕ್ಷೇತ್ರದ ವಿವಿಧ ಸ್ತರಗಳಲ್ಲಿ ಅಂದರೆ ಪೂರ್ವ ಪ್ರಾಥಮಿಕ ಹಂತದಿಂದ ಆರಂಭಗೊಂಡು ಉನ್ನತ ಹಾಗೂ ಸಂಶೋಧನೆಯಲ್ಲಿ ತೊಡಗಿಕೊಂಡು ಕೆಲಸ ಮಾಡುತ್ತಿರುವ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಣ ತಜ್ಞರು, ಚಿಂತಕರು, ಮಾಜಿ ಕುಲಪತಿಗಳು, ಶಿಕ್ಷಣ ಕ್ಷೇತ್ರದಿಂದ ಆರಿಸಿ ಬಂದ ಜನಪ್ರತಿನಿಧಿಗಳು ಅಲ್ಲದೇ ಶಿಕ್ಷಣ ಕ್ಷೇತ್ರ ಕುರಿತು ಆಸಕ್ತಿ ಮತ್ತು ಕಳಕಳಿ ಹೊತ್ತವರೆಲ್ಲರೂ ಸಕ್ರೀಯರಾಗಿ ಈ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಶಿಕ್ಷಣದ ಜೊತೆಗೆ ನಮ್ಮ ಮಕ್ಕಳು ಉತ್ತಮ ಮನ:ಸತ್ವವುಳ್ಳವರಾಗಿ, ಸಶಕ್ತರಾಗಿ, ಮಾನಸಿಕ ಧೃಡತೆಯೊಂದಿಗೆ ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಪ್ರಜೆಗಳಾಗಿ ರೂಪುಗೊಳ್ಳಬೇಕೆಂಬ ಹಂಬಲದೊಂದಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಈ ವೇದಿಕೆಯ ಸದಸ್ಯರ ತಂಡ ಶಿಕ್ಷಣ ಕ್ಷೇತ್ರದ ಒಳಿತಿಗಾಗಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ.
ರಾಜ್ಯದಲ್ಲಿ ನಡೆದ ಕಳೆದ ಚುನಾವಣೆಯ ನಂತರ ಆಡಳಿತಕ್ಕೆ ಬಂದಿರುವ ಈ ಸರ್ಕಾರ ಕೇವಲ ರಾಜಕೀಯ ಧೋರಣೆಯನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ-2020 ರ ವಿರುದ್ಧವಾಗಿ ನಿಲುವು ತೆಗೆದುಕೊಂಡಿದ್ದು, ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿಯ ರಚನೆಗೆ ಸಮಿತಿಯೊಂದನ್ನು ರಚಿಸಿದ್ದು, ಹೀಗೆ ರಚಿತವಾದ ಸಮಿತಿ ತನ್ನ ಉದ್ದೇಶಿತ ಕಾರ್ಯದಲ್ಲಿ ಈಗಾಗಲೇ ತನ್ನನ್ನು ತೊಡಗಿಸಿಕೊಂಡಿರುವುದು ರಾಜ್ಯದ ಎಲ್ಲ ಸಾಮಾನ್ಯ ಜನರಿಗೂ ತಿಳಿದ ವಿಷಯ. ಆದರೆ ಸಮಿತಿಯ ರಚನೆ, ಅದರ ಉದ್ದೇಶ ಹಾಗೂ ಅದು ಮಾಹಿತಿ ಸಂಗ್ರಹಿಸುತ್ತಿರುವ ವಿಧಾನ ಕುರಿತು ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಅಸಮಾಧಾನವನ್ನು ಸೃಷ್ಠಿಸಿದೆ ಎಂದು ಮಾಧ್ಯಮದ ಗಮನಕ್ಕೆ ಈ ಮೂಲಕ ತರಲು ಬಯಸುತ್ತಿದ್ದೇವೆ.
ಶಿಕ್ಷಣ ಕ್ಷೇತ್ರದಲ್ಲಿ ಚರ್ಚೆಯಲ್ಲಿರುವ ಪ್ರಮುಖ ವಿಷಯಗಳು :
ಕನ್ನಡ ಹಾಗೂ ಕನ್ನಡ ಸಂಸ್ಕೃತಿಯ ಪರಿಚಯ ಮಕ್ಕಳಿಗೆ ಎನ್ ಇ ಪಿ-2020 ಅಳವಡಿಕೆಯಿಂದ ಸಾಧ್ಯವಿಲ್ಲ ಎಂದು ಕಾರಣ ನೀಡಿದ ಸರ್ಕಾರ ರಾಜ್ಯ ಶಿಕ್ಷಣ ನೀತಿ ಸಿದ್ಧ ಪಡಿಸಲು ರಚಿಸಿದ ಸಮಿತಿಯ ರಚನೆ ಕುರಿತು ಶಿಕ್ಷಣ ಕ್ಷೇತ್ರದವರಲ್ಲಿ ಅಸಹನೆಯಿದೆ.
- ಕನ್ನಡದವರಲ್ಲದವರು ಚುಕ್ಕಾಣಿ ಹಿಡಿದಿರುವ ಹಾಗೂ ಕನ್ನಡದಲ್ಲದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡಿರುವ ಸಮಿತಿ ಕನ್ನಡದ ಮಕ್ಕಳಿಗೆ ಯಾವ ರೀತಿಯ ನ್ಯಾಯ ಒದಗಿಸೀತು? ಈ ಮಣ್ಣಿನ ಸಂಸ್ಕೃತಿ ಕುರಿತು ಅಧ್ಯಯನ ಮಾಡಿ, ಓದಿ, ಕೇಳಿ -ತಿಳಿದು ರಾಜ್ಯ
ಶಿಕ್ಷಣ ನೀತಿಯನ್ನು ಸಿದ್ಧಮಾಡುವರೇ ಹೇಗೆ?
- ಜೊತೆಗೆ ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಹೊಂದಿದ ಅನೇಕ ಕನ್ನಡದವರೇ ಶಿಕ್ಷಣ ತಜ್ಞರಿರುವಾಗ ಹೊರಗಿನವರನ್ನು ಸರ್ಕಾರ ಗುರುತಿಸಿ ಕರೆತಂದಿರುವುದು ಈ ನೆಲದ ಮಣ್ಣಿನ ಶಿಕ್ಷಣ ತಜ್ಞರು ರಾಷ್ಟಕ್ಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಈ ಸರ್ಕಾರ
ಪರಿಗಣಿಸಿಲ್ಲ ಎಂಬ ನೋವು ನಮಗಿದೆ.
-ವಿಪರ್ಯಾಸವೋ ಎಂಬಂತೆ ಎನ್‍ಇಪಿ-2020 ರಚನೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕದವರ ಶಿಕ್ಷಣದ ಗುಣಮಟ್ಟವನ್ನು ಗುರುತಿಸಿ ನೀಡಿದ ಮುಂಚೂಣಿಯ ಸ್ಥಾನ, ರಾಜ್ಯ ಸರ್ಕಾರದ ಸಮಿತಿಯಲ್ಲಿ ಆದ್ಯತೆ ಪಡೆಯದಿರಲು ಕಾರಣವೇನು?
- ಎಸ್‍ಇಪಿ ಸದಸ್ಯರು ಎನ್‍ಇಪಿ ಸದಸ್ಯರ ಜೊತೆ ಚರ್ಚಿಸಿ ಮುನ್ನಡೆಯುತ್ತಿದ್ದಾರೆಯೇ ಎಂಬ ವಿಷಯ ಕುರಿತು ನಮಗೆ ಸ್ಪಷ್ಠತೆ ಬೇಕಿದೆ.
ಎನ್ ಇ ಪಿ-2020 ರಚನೆಯ ಸಮಯದಲ್ಲಿ ಪ್ರತಿ ರಾಜ್ಯದಿಂದ ಒಟ್ಟು 25 ಪೊಸಿಷನ್ ಪೇಪರ್ ಗಳನ್ನು ಪ್ರತಿ ರಾಜ್ಯದಲ್ಲೂ ಶಿಕ್ಷಣ ತಜ್ಞರ ನೆರವಿನಿ0ದ ಸಿದ್ಧಪಡಿಸಲಾಗಿತ್ತು. ಕರ್ನಾಟಕದಲ್ಲಿ ರಾಜ್ಯ ಶಿಕ್ಷಕರ ಸಂಘದಿಂದ ವಿಶೇಷವಾಗಿ ಒಟ್ಟು 27 ಪೊಸಿಷನ್ ಪೇಪರ್ ಗಳನ್ನು ಸಿದ್ಧಪಡಿಸುವಲ್ಲಿ ರಾಜ್ಯದ ಎಲ್ಲ ವಿಭಾಗಗಳಿಂದ ಬಂದ ಶಿಕ್ಷಣ ತಜ್ಞರು ಸಕ್ರೀಯರಾಗಿ ಭಾಗವಹಿಸಿದ್ದರು. ಈ ಸರ್ಕಾರ ರಚಿಸಿರುವ ರಾಜ್ಯ ಶಿಕ್ಷಣ ಸಮಿತಿ, ಅದಾಗಲೇ ಉನ್ನತ ಶಿಕ್ಷಣ ತಜ್ಞರ ಸಲಹೆಗಳನ್ನು ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಉನ್ನತ ಶಿಕ್ಷಣದ ಸ್ಥಿತಿ-ಗತಿ ಕುರಿತ ಅಧ್ಯಯನ ಆಧಾರಿತ ಪೊಸಿಷನ್ ಪೇಪರ್ ಗಳನ್ನು ರಚಿಸಿ ಮುನ್ನಡೆಯಿಡುತ್ತಿದ್ದೆಯೇ, ಎಂದು ನಾವು ತಿಳಿಯಬೇಕಿದೆ. ಹಾಗಿಲ್ಲದೇ ಹೋದಲ್ಲಿ ಅಧ್ಯಯನವೇ ಇಲ್ಲದೇ ಸಮಿತಿಯು ಮಾಹಿತಿ ಸಂಗ್ರಹಿಸುವ ತನ್ನ ಕಾರ್ಯ ಆರಂಭಿಸಬಹುದೇ? ಎನ್ನುವ ಗೊಂದಲ ನಮ್ಮಲ್ಲಿದೆ.
ಎನ್ ಇ ಪಿ-2020 ಗ್ರಾಮೀಣ ಮಟ್ಟದಿಂದ ಹಿಡಿದು ಸಮಾಜದ ಎಲ್ಲ ಸ್ತರದ ಜನರೊಂದಿಗೆ ಚರ್ಚಿಸಿ, ಸಭೆ -ಗೋಷ್ಠಿ ನಡೆಸಿ, ಸೆಮಿನಾರ್ ಗಳನ್ನು, ನಡೆಸಿ ಸಂಗ್ರಹಿಸಿದ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಮೂಲಕ ವರದಿಯನ್ನು ಸಿದ್ಧಪಡಿಸಿ ಜನಸಾಮಾನ್ಯರ ಮುಂದಿಟ್ಟಿತು. ಆನ್ ಲೈನ್ ಮೂಲಕವೂ ಜನರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದಿತ್ತು. ಈ ರೀತಿ ಕೆಲಸ ಮಾಡಲು ಸಾಕಷ್ಟು ಸಮಯವೂ ಬೇಕು ಅಲ್ಲವೇ? ಇಂತಹ ಪ್ರಯತ್ನ ರಾಜ್ಯ ಶಿಕ್ಷಣ ಸಮಿತಿಯಿಂದ ನಡೆದ ಬಗ್ಗೆ ಶಿಕ್ಷಣ ಕ್ಷೇತ್ರಕ್ಕೆ ಮಾಹಿತಿ ಪಬ್ಲಿಕ್ ಡೋಮೇನ್ ನಲ್ಲೂ ಲಭ್ಯವಿಲ್ಲ, ಸಾರ್ವಜನಿಕರು ಭಾಗವಹಿಸಲೂ ಅವಕಾಶವಿಲ್ಲ. ಅನುವು ಮಾಡಿಕೊಟ್ಟಿರುವಿರಾದರೆ ಈ ಕುರಿತು ಶಿಕ್ಷಣ ಕ್ಷೇತ್ರ ಸ್ಪಷ್ಟ ಮಾಹಿತಿ ಬಯಸುತ್ತದೆ.
ಎಸ್ ಇ ಪಿ ಯ ಸದಸ್ಯರು ನಡೆಸುತ್ತಿರುವ ಸಭೆಗಳಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲು ರಾಜ್ಯದ ಕೆಲವೇ ಆಯ್ದ ಶಿಕ್ಷಣ ತಜ್ಞರನ್ನು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳನ್ನುಆಹ್ವಾನಿಸಲಾಗುತ್ತಿದೆ. ಆದರೆ ಶಿಕ್ಷಣ ಕ್ಷೇತ್ರದ ಪ್ರತಿ ಹಂತದಲ್ಲೂ ಸಕ್ರೀಯವಾಗಿರುವ ಶಿಕ್ಷಣ ತಜ್ಞರ ಸಮಿತಿ ಶಿಕ್ಷಕ ಸಂಘಗಳು ಇದರೊಂದಿಗೆ ರಾಷ್ಟೀಯ ಮಟ್ಟದ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರು, ಕಾಲೇಜು ಬೆಟರ್ಮೆಂಟ್ ಸಮಿತಿಯ ಸದಸ್ಯರೂ ಸೇರಿದಂತೆ ಇನ್ನಿತರ ಶಿಕ್ಷಣ ಕ್ಷೇತ್ರದ ಸದಸ್ಯರನ್ನು ಈ ಸಮಿತಿ ಏಕೆ ದೂರವಿಟ್ಟಿದೆ ಎಂದೂ ನಾವು ತಿಳಿಯಬಯಸುತ್ತೇವೆ. ಅಲ್ಲದೇ ಎನ್ ಇ ಪಿ-2020ರ ಸಲಹೆಗನುಗುಣವಾಗಿ ಉನ್ನತ ಶಿಕ್ಷಣದಲ್ಲಿ ಅಳವಡಿಸಲಾಗಿರುವ ಆನರ್ಸ ಪದವಿ, ಬಹುಶಿಸ್ತೀಯ ಕಲಿಕೆ ಹಾಗೂ ಮಲ್ಟಿಪಲ್ ಎಕ್ಸಿಟ್ – ಮಲ್ಟಿಪಲ್ ಎಂಟ್ರಿ ಅವಕಾಶ ಹೀಗೆ ಕೆಲವೇ ಅ0ಶಗಳನ್ನು ಶಿಕ್ಷಣ ತಜ್ಞರ ಮುಂದಿಟ್ಟು ಎಸ್ ಇ ಪಿ ಸಮಿತಿಯು ಅಭಿಪ್ರಾಯ ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಉನ್ನತ ಶಿಕ್ಷಣವೆಂದರೆ ಈ ಕೆಲವೇ ಅಂಶಗಳೇ? ಶಿಕ್ಷಣ ಕ್ಷೇತ್ರ ಸರ್ಕಾರದಿಂದ ಉತ್ತರ ಬಯಸುತ್ತದೆ. ಆದಗ್ಯೂ ಸಮಿತಿಯ ಸದಸ್ಯರು ಆಯ್ದ ಶಿಕ್ಷಕರ ಸಭೆಗಳಲ್ಲಿ ಎತ್ತಲಾಗುತ್ತಿರುವ ವಿಷಯಗಳ ಕುರಿತು ನೋಡುವುದೇ ಆದರೂ-
- ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮ ವಿದ್ಯಾರ್ಥಿಯ ಇಚ್ಛೆಗೆ ಬಿಟ್ಟಿದ್ದು. ಸಂಶೋಧನೆಯಲ್ಲಿ ತೊಡಗ ಬಯಸುವ ಅಥವಾ ನೌಕರಿಗಾಗಿ ತನ್ನನ್ನು ತೀವ್ರಗತಿಯಲ್ಲಿ ಸಿದ್ಧಪಡಿಸಿಕೊಳ್ಳುವ, ಉನ್ನತ ವ್ಯಾಸಂಗಕ್ಕಾಗಿ ವಿದೇಶದ ಅಥವಾ ಭಾರತೀಯ ವಿಶ್ವವಿದ್ಯಾಲಯದಲ್ಲಿ ದಾಖಲಾಗ ಬಯಸುವ ವಿದ್ಯಾರ್ಥಿಗಳು ಈ ಆನರ್ಸ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂಬ ಸ್ಪಷ್ಠತೆ ಎನ್ ಇ ಪಿ -2020 ನೀಡಿದೆ.
ಓಪನ್ ಎಲೆಕ್ಟಿವ್ ಮತ್ತು ಎಸ್ ಇ ಸಿ ಆಯ್ಕೆಯು ಈಗಾಗಲೇ ಚಾಲ್ತಿಯಲ್ಲಿರುವ ಸಿ ಬಿ ಸಿ ಎಸ್ ನ ಭಾಗವಾಗಿದ್ದು ಈ ವ್ಯವಸ್ಥೆ ಒಂದು ದಶಕದ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಸ್ನಾತಕೊತ್ತರ ವಿಭಾಗದಲ್ಲಿ ಅಳವಡಿಕೆಯಾದ ಈ ಪದ್ಧತಿಯನ್ನು ಬದಲಾಗುತ್ತಿರುವ ಔದ್ಯೋಗಿಕ ಕ್ಷೇತ್ರಗಳಿಗೆ ಅನುಕೂಲವಾಗಿ ಪದವಿಯ ನಂತರದಲ್ಲಿಯೇ ಅನುಕೂಲವಾಗುವಂತೆ ಎನ್ ಇ ಪಿ 2020 ಸಲಹೆ ಮಾಡಿದೆ. ಸಿ ಬಿ ಸಿ ಎಸ್ ಈ ಪದ್ಧತಿಯನ್ನು ಕರ್ನಾಟಕ 2018 ರಿಂದಲೇ ಆಚರಣೆಗೆ ತಂದಾಗಿದೆ
- ಬಹುಶಿಸ್ತಿಯ ಕಲಿಕೆ ಭಾರತದ ಶಿಕ್ಷಣ ಪರಂಪರೆಯಲ್ಲಿ ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ನಳಂದ, ತಕ್ಷಶಿಲಾ, ವಿಕ್ರಮಶೀಲ ವಿಶ್ವವಿದ್ಯಾಲಯಗಳು ವಿಶ್ವದ ಎಲ್ಲ ಭಾಗಗಳಿಂದ ವಿದ್ಯಾರ್ಥಿಗಳನ್ನು ಈ ಕಾರಣಕ್ಕಾಗಿಯೇ ಆಕರ್ಷಿಸುತ್ತಿದ್ದವು ಎನ್ನುವುದು ತಿಳಿದ ವಿಷಯವೇ. ಬಹುಶಿಸ್ತಿಯ ಕಲಿಕೆಯ ಅವಕಾಶವನ್ನು ಯುಜಿಸಿ 2015 ರಿಂದಲೇ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಅವಕಾಶ ಕಲ್ಪಿಸಿದೆ.
- ಅಧ್ಯಯನಗಳ ಮೂಲಕ ಶಿಕ್ಷಣದಿಂದ ಕೌಟುಂಬಿಕ ಹಾಗೂ ಇನ್ನಿತರ ಕಾರಣಗಳನ್ನು ಮುಂದಿಟ್ಟು ಶಿಕ್ಷಣದಿಂದ ಹೊರ ಬರುವವರ ಸಂಖ್ಯೆ ರಾಜ್ಯದಲ್ಲಿದೆ. ಅದರಲ್ಲೂಶಿಕ್ಷಣದಿಂದ ಹೊರ ಬರುತ್ತಿರುವ ಗ್ರಾಮೀಣ ವಿಭಾಗದ ಮತ್ತು ಹೆಣ್ಣುಮಕ್ಕಳು ಎಂದು ವಿಶೇಷವಾಗಿ ಹೇಳಬೇಕಿಲ್ಲ. ರಾಜ್ಯ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊಫೆಸರ್ ಥೋರಟ್ ರು 2005 ರಲ್ಲಿ ಯು ಜಿ ಸಿ ಅಧ್ಯಕ್ಷರಾಗಿದ್ದಾಗ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ಕಾಳಜಿಯನ್ನು ವ್ಯಕ್ತ ಪಡಿಸಿದ್ದರು. ಮಲ್ಟಿಪಲ್ ಎಕ್ಸಿಟ್ ಮತ್ತು ಡಿಪ್ಲೋಮಾ ಪದವಿ ಸರ್ಟಿಫಿಕೇಟ್‍ಗಳು ಇಂತಹ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ತಾವು ಶಿಕ್ಷಣವನ್ನು ನಿಗದಿತ ಸಮಯದೊಳಗೆ ಹಿಂದುರುಗಿ ಬಂದು ಮುಂದುವರೆಸುವ ಅವಕಾಶವನ್ನು ಸಲಹೆಯಡಿ ಅವಕಾಶ ಕಲ್ಪಿಸಲಾಗಿದೆ. ಶೈಕ್ಷಣಿಕ ಸಂಸ್ಥೆಯೊಂದರಿಂದ ದೊರೆತ ಪ್ರಶಸ್ತಿ ಪತ್ರ ವ್ಯಕ್ತಿಯ ಜೀವನ ಕಟ್ಟಬಹುದಾದರೆ ಅಂತಹ ಪದ್ಧತಿಗೆ ಕುರಿತು ಜಿಜ್ಞಾಸೆಯೇಕೆ?
ಸಮಗ್ರ ಶಿಕ್ಷಣ ಕ್ಷೇತ್ರದ ಸಮುದಾಯದ ಪಾಲುದಾರಿಕೆಯಿಲ್ಲದೇ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧವಾಗುವುದು ಸರಿಯೇ? ಅದರಲ್ಲೂ ಮುಂದಿನ ಶೈಕ್ಷಣಿಕ ವರ್ಷದೊಳಗೆ, ವಿಶೇಷವಾಗಿ ಲೋಕಸಭೆಗೂ ಮುನ್ನವೇ ವರದಿ ಸಿದ್ಧಪಡಿಸಲು ಹೊರಟ ರಾಜ್ಯ ಸಮಿತಿಯಿಂದ ರಾಜ್ಯ ಶಿಕ್ಷಣ ಕುರಿತ ಸಮಗ್ರ ವರದಿ ನಿಜಾರ್ಥದಲ್ಲಿ ಸಾಧ್ಯವೇ? ಸಮಿತಿಯ ತುರಾತುರಿಯ ವರದಿ ಸಲ್ಲಿಕೆ, ರಾಜಕಾರಣಕ್ಕಾಗಿ ಮಕ್ಕಳ ಭವಿಷ್ಯವನ್ನು ಬಲಿತೆಗೆದು ಕೊಳ್ಳುವ ಆತುರದ ನಿರ್ಧಾರವೆಂದು ಶಿಕ್ಷಣ ಕ್ಷೇತ್ರದ ಆತಂಕವಾಗಿದೆ.
ಉನ್ನತ ಶಿಕ್ಷಣ ಕುರಿತ ನಿರ್ಣಯಗಳನ್ನು ಉನ್ನತ ಸಂಸ್ಥೆಗಳಾದ ಯುಜಿಸಿ ಹಾಗೂ ಏಆಯ್ ಸಿಟಿಇ ಗಳು ತೆಗೆದುಕೊಳ್ಳುತ್ತವೆಯಾದ್ದರಿಂದ, ಎಸ್ ಇ ಪಿಯ ಸಮಿತಿ ಈ ಸಮಿತಿಗಳೊಂದಿಗೆ ಚರ್ಚಿಸಿದೆಯೇ ಎನ್ನುವುದನ್ನೂ ಶಿಕ್ಷಣ ಕ್ಷೇತ್ರ ತಿಳಿಯಬಯಸುತ್ತದೆ. ಈ ಕುರಿತಾಗಿಯೂ ನಮಗೆ ಮಾಹಿತಿಯ ಅಗತ್ಯವಿದೆ.
ಎನ್ ಇ ಪಿ-2020ರ ಅಳವಡಿಕೆಗೆ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಮೂಲ ಭೂತ ಸೌಕಯ9ದ ಕೊರತೆಯ ಕುರಿತು ಪ್ರಸ್ತಾಪ ಮಾಡಲಾಗಿತ್ತು. ರಾಜ್ಯದ ಶಾಲಾ ಕಾಲೇಜುಗಳಲ್ಲಿರುವ ಮಾನವ ಸಂಪನ್ಮೂಲ ಹಾಗೂ ಇತರ ಕೊರತೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿದೆಯೇ? ಹಾಗೂ ಕೊರತೆಗಳ ಸಮಗ್ರ ಚಿತ್ರಣ ಕುರಿತ ವರದಿ ಸರ್ಕಾರ ಜನತೆಗೆ ಒದಗಿಸಬಹುದೇ?
ರಾಜ್ಯದ ಆಡಳಿತ ಸ್ವಾಮ್ಯದಲ್ಲಿ ಬರುವ ಶಾಲೆಗಳು ಮತ್ತು ಕಾಲೇಜುಗಳು ಮಾತ್ರ ರಾಜ್ಯ ಶಿಕ್ಷಣ ಸಮಿತಿ ಸಲಹೆಯ ವ್ಯಾಪ್ತಿಗೆ ಬರುವುದರಿಂದ ಮುಖ್ಯವಾಗಿ ಖಾಸಗಿ ಒಡೆತನದಲ್ಲಿರುವ ಶಾಲೆಗಳು-ಮತ್ತು ವಿಶ್ವವಿದ್ಯಾಲಯಗಳು ಎನ್ ಇ ಪಿಯ ಅನ್ವಯ ಶಿಕ್ಷಣ ನೀಡಿದಲ್ಲಿ ರಾಜ್ಯದ ಶಾಲಾ -ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮುಂದಿನ ವರ್ಷಗಳಲ್ಲಿ ಕಡಿಮೆಯಾಗ ಬಹುದೆಲ್ಲವೇ? ಅಲ್ಲದೇ ಖಾಸಗಿ ಶಾಲೆಗಳು ಕ್ರಮೇಣ ರಾಜ್ಯದ ಬೋರ್ಡನಿಂದ ಹೊರಬಂದು ಕೇಂದ್ರದ ಬೋರ್ಡಗಳನ್ನು ತಮ್ಮ ಶಾಲೆಗಳಲ್ಲಿ ಅಳವಡಿಸಬಹುದಲ್ಲವೇ? ರಾಜ್ಯದ ಕನ್ನಡ ಶಾಲೆಗಳನ್ನು ಕ್ರಮೇಣ ಮುಚ್ಚುವ ಆಲೋಚನೆ ಸರ್ಕಾರದ ಮನದಲ್ಲಿರುವಂತೆ ಭಾಸವಾಗುತ್ತಿದೆ.
ರಾಜ್ಯ ಶಿಕ್ಷಣ ಸಮಿತಿಯು ನೀಡುವ ನೀತಿಯ ಅಳವಡಿಕೆ ಕೇವಲ ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾತ್ರವೇ ಸೀಮಿತ ವಾಗುವುದರಿಂದ ಉಳ್ಳವರಿಗೆ ಎನ್ ಇ ಪಿ ಶಿಕ್ಷಣವಾದರೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಸ್ ಇ ಪಿ ಎನ್ನುವ ಎರಡು ವರ್ಗದ ಸೃಷ್ಠಿಗೆ ರಾಜ್ಯ ಸರ್ಕಾರದ ಈ ನಿರ್ಧಾರ ಕಾರಣವಾಗುತ್ತಿದೆ ಎಂಬ ಅಂಶ ನೋವನ್ನುಂಟುಮಾಡಿದೆ.
ಜಾಗತಿಕ ಮಟ್ಟಕ್ಕೆ ನಮ್ಮ ವಿದ್ಯಾರ್ಥಿಗಳನ್ನು ರೂಪಿಸಲು ಸನ್ನದ್ಧರಾಗಬೇಕಾದ ಸಂದರ್ಭದಲ್ಲಿ, ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ ಅಗತ್ಯತೆಗೆ ಅನುಗುಣವಾಗಿ ಶಿಕ್ಷಣವನ್ನು ರೂಪಿಸಬೇಕಾದ ಅಗತ್ಯವಿರುವ ಹಿನ್ನಲೆಯಲ್ಲಿ ಕೇವಲ ರಾಜಕೀಯ-ರಾಜಕಾರಣವನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ-2020ರ ವಿರುದ್ಧ ಇಂದು ರಾಜ್ಯದಲ್ಲಿ ಆಡಳಿತದಲ್ಲಿರುವ ಸರ್ಕಾರ ನಿರ್ಣಯ ತೆಗೆದುಕೊಂಡಿದೆ ಎನ್ನುವುದು ಸುಸ್ಪಷ್ಠ.
ಸರ್ಕಾರದ ಎಸ್ ಇ ಪಿ ರಚನೆಯ ನಿಲುವಿನ ಹಿನ್ನಲೆ ಕುರಿತು ಕೇವಲ ಶಿಕ್ಷಣ ಕ್ಷೇತ್ರವಷ್ಟೇ ಅಲ್ಲದೇ ವಿದ್ಯಾರ್ಥಿಗಳ ಪಾಲಕರಿಗೂ ಅರಿವಿದೆ ಮತ್ತು ಅಸಮಾಧಾನವಿದೆ ಎನ್ನುವುಕ್ಕೆ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ವೇದಿಕೆ ಎನ್ ಇ ಪಿ-2020 ರ ಕುರಿತು ರಾಜ್ಯದಾದ್ಯಂತ ಪ್ರತಿ ಜಿಲ್ಲೆಯಲ್ಲೂ ನಡೆಸಿದ ಜಾಗೃತಿ ಒಟ್ಟು 53 ಕಾರ್ಯಕ್ರಮಗಳಲ್ಲಿ ಮತ್ತು ನಂತರ ನಡೆದ ಸಹಿ ಅಭಿಯಾನಗಳಿಗೆ ಸಿಕ್ಕ ಮನ್ನಣೆ ಸಾಕ್ಷಿ. ಕೇವಲ ಒಂದು ತಿಂಗಳ ಕಾಲ ರಾಜ್ಯದಾದ್ಯಂತ ನಡೆಸಿದ ಸಹಿ ಚಳುವಳಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ. ಅದರಲ್ಲೂ ಅದರ ಪ್ರಮುಖ ಪಾತ್ರಧಾರಿಗಳು ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಎಂದು ನಿಮ್ಮ ಗಮನಕ್ಕೆ ಈ ಮೂಲಕ ತರಲು ಇಚ್ಚಿಸುತ್ತೇವೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ಪರ್ಯಾಯವಾಗಿ ಎಸ್‍ಇಪಿ ರಚಿಸುತ್ತಿರುವ ಸರ್ಕಾರ ಇದುವರೆಗೂ ಎನ್‍ಇಪಿ ಏಕೆ ಬೇಡವೆಂದು ರಾಜಕಾರಣದ ನಿಲುವಿನ ಹೊರತಾಗಿ ಇದುವರೆಗೂ ತಮ್ಮಂತಹ ಪ್ರಾಜ್ಞಾವಂತರೂ ಒಳಗೊಂಡಿರುವ ಇಂದಿನ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಇಂದಿನವರೆಗೂ ಸ್ಪಷ್ಠಣೆ ನೀಡಿಲ್ಲ.
ರಾಷ್ಟ್ರಕ್ಕೊಂದೇ ಶಿಕ್ಷಣ ನೀತಿಯಿರಬೇಕೆಂಬ ಅಭಿಪ್ರಾಯವನ್ನು ದಿ.ರಾಜೀವ ಗಾಂಧಿಯವರ ಆಶಯವನ್ನೂ ಅದೇ ಪಕ್ಷದವರು ರಾಜ್ಯದಲ್ಲಿ ರಚಿಸಿರುವ ಸರ್ಕಾರ, ರಾಜಕಾರಣ ಮಾಡುವ ಉತ್ಸಾಹದಲ್ಲಿ ಮರೆತರೋ ಎಂಬ ಅಭಿಪ್ರಾಯವೂ ನಮ್ಮಲ್ಲಿದೆ. ಸ್ವಾತಂತ್ರನಂತರ ರೂಢಿಸಿದ ಮೊದಲ ಎರಡೂ ಶಿಕ್ಷಣ ನೀತಿಗಳನ್ನು ಯಾವ ರಾಜ್ಯ ಸರ್ಕಾರಗಳೂ ತೆಗೆದು ಹಾಕಿದ ನಿದರ್ಶನಗಳಿಲ್ಲ, ಶಿಕ್ಷಣ ವಲಯವನ್ನು ರಾಜಕೀಯದಿಂದ ಹೊರಗಿಡುವ ಜವಾಬ್ದಾರಿಯನ್ನು ಈ ಸರ್ಕಾರ ಮುಂದುವರೆಸಿ ಎನ್ನುವ ಹಕ್ಕೊತ್ತಾಯದ ಬೇಡಿಕೆ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ವೇದಿಕೆಯದು. ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ((NEP)-2020 ಕರ್ನಾಟಕದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಆರಂಭವಾಗಿರುವ ಸಹಿ ಸಂಗ್ರಹ ಅಭಿಯಾನದ ವರದಿ.
168 ತಾಲ್ಲೂಕು, 34 ಶೈಕ್ಷಣಿಕ ಜಿಲ್ಲೆ
2630 ಶಾಲೆ/ಕಾಲೇಜುಗಳಿಂದ 83,600ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು, 26980 ಪೋಷಕರು.
19327 ಆನ್ಲೈನ್ ಕ್ಯಾಂಪೇನ್ ಸಹಿ, 8,88,173 ವಿದ್ಯಾರ್ಥಿಗಳಿಂದ ಸಹಿ, ಒಟ್ಟು ಸಹಿ-10,16,080
ಈ ಸಹಿ ಸಂಗ್ರಹದ ಪ್ರತಿಗಳ ಬಂಡಲಗಳನ್ನು ಮುಂದಿನ ದಿನಗಳಲ್ಲಿ ಮಾನ್ಯ ರಾಜ್ಯಪಾಲರಿಗೆ ನಿಯೋಗದೊಂದಿಗೆ ಸಲ್ಲಿಸಲಾಗುವುದು. ಈ ಪತ್ರಿಕಾಗೋಷ್ಠಿಯನ್ನು ಪಿಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜ್ಯುಕೇಶನ್ ನ ವಿಭಾಗ ಸಂಚಾಲಕರಾದ ರಮೇಶ ಕೆ ನಡೆಸಿಕೊಟ್ಟರು. ಮಂಗಳೂರು ಸಂಚಾಲಕರಾದ ಪ್ರೋ ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು.