ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ಕಾಲೇಜಿನ ವಿದ್ಯಾರ್ಥಿನಿ ಕು. ಸುಮೇಧ ಅವರು ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಕನ್ನಡ-ತುಳು ಭಾಷೆ ಮತ್ತು ಜಾನಪದ ತಜ್ಞ ಡಾ ವಿಶ್ವನಾಥ ಬದಿಕಾನ ಅವರು ಮುಖ್ಯ ಅತಿಥಿಯಾಗಿ ರಾಜ್ಯೋತ್ಸವ ಭಾಷಣವನ್ನು ನುಡಿದರು. ಕರ್ನಾಟಕ ಏಕೀಕರಣದ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸಿದ ಡಾ ಬದಿಕಾನ ಅವರು, ಕರ್ನಾಟಕ ಹೆಸರಿನ ಸುವರ್ಣ ಸಂಭ್ರಮದ ಬಗ್ಗೆ ಬೆಳಕು ಚೆಲ್ಲಿದರು. ಇಂದು ಕನ್ನಡ ನಮ್ಮ ಅಧಿಕಾರದ ಭಾಷೆಯಾಗಿ ನಮಗೆ ಅನ್ನವನ್ನು ಕೊಡುವ ಭಾಷೆಯಾಗಿದೆ. ಹಾಗಾಗಿ ಕನ್ನಡ ಎಂಬುದು ಕನ್ನಡಿಗರಾದ ನಮಗೆ ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ, ಕನ್ನಡ ನಮ್ಮ ಅಸ್ಮಿತೆ, ಅಸ್ತಿತ್ವದ ಭಾಷೆಯಾಗಿದೆ ಎಂಬುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂತ ಅಲೋಶಿಯಸ್ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕರಾಗಿರುವ ವಂದನೀಯ ಧರ್ಮಗುರುಗಳಾದ ಡಾ ಮೆಲ್ವಿನ್ ಡಿಕುನ್ಹ ಅವರು ಮಾತನಾಡಿ, ಕವಿರಾಜಮಾರ್ಗದಿಂದ ತೊಡಗಿ ಆಧುನಿಕ ಕವಿಗಳ ಸಾಹಿತ್ಯ ಕೃಷಿಯ ಬಗ್ಗೆ ತಿಳಿಸುತ್ತಾ, ಕರ್ನಾಟಕದ ಸವಿಸ್ತಾರವಾದ ಭೌಗೋಳಿಕತೆ, ಬಹುರೂಪೀ ಕನ್ನಡದ ಬಗ್ಗೆ, ಕನ್ನಡ ಸಂಸ್ಕೃತಿಯ ಹಿರಿಮೆ- ಗರಿಮೆಯ ಬಗ್ಗೆ ಹೇಳಿದರು.
ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವರಾಗಿರುವ ಡಾ ಆಲ್ವಿನ್ ಡೇಸಾ ಅವರು ಎಲ್ಲರನ್ನು ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ದಿನೇಶ್ ನಾಯಕ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಸಚಿವರಾಗಿರುವ ಡಾ ರೊನಾಲ್ಡ್ ನಜರೆತ್, ವಿವಿಯ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗಗಳ ಮುಖ್ಯಸ್ಥರಾಗಿರುವ ಡಾ ರೋಸ್ ವೀರಾ ಡಿಸೋಜಾ ಅವರು, ಕಾಲೇಜಿನ ಕಛೇರಿ ಅಧೀಕ್ಷಕರಾದ ಹೆನ್ರಿ ಡಿಸೋಜಾ ಅವರು, ವಿವಿಧ ಬ್ಲಾಕ್ ಗಳ ನಿರ್ದೇಶಕರು, ವಿವಿಧ ವಿಭಾಗಗಳ ಡೀನ್ ಮತ್ತು ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರು, ಎನ್ ಸಿ ಸಿ ಕೆಡೆಟ್ ಗಳು, ಎನ್ ಎಸ್ ಎಸ್ ಸ್ವಯಂಸೇವಕರು, ಕ್ರೀಡಾ ವಿಭಾಗದವರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.