ಮಂಗಳೂರು:- ಹರಿಕಥಾ ಪರಿಷತ್ (ರಿ.) ಮಂಗಳೂರು ಇದರ ದಶಮಾನೋತ್ಸವದ ಅಂಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಜಂಟಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ಹತ್ತು ದಿನಗಳ ‘ಹರಿಕಥೆ ಪರ್ಬ’ದ ನಾಲ್ಕನೆಯ ದಿನದ ಕಾರ್ಯಕ್ರಮವನ್ನು ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಉದ್ಘಾಟಿಸಿದರು. ‘ಚಿರಂತನ ಮೌಲ್ಯಗಳನ್ನು ಪುರಾಣ ಕಥೆಗಳ ಮೂಲಕ ಪ್ರತಿಪಾದಿಸುವಂತಹ ಹರಿಕಥೆ ಕಲೆಯನ್ನು ಇನ್ನಷ್ಟು ಪ್ರಚಾರ ಮಾಡಬೇಕಾಗಿದೆ’ ಎಂದರು.

ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ಎ.ಶಿವಾನಂದ ಕರ್ಕೇರ ‘ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದಕ್ಕೆ ಸೇರಿಸಲು ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ’ ಎಂದರು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‍ಸಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಸದಸ್ಯರಾದ ನಿಟ್ಟೆಗುತ್ತು ಶಶಿಧರ ಶೆಟ್ಟಿ ಉಪಸ್ಥಿತರಿದ್ದರು. ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಕೆ.ಮಹಾಬಲ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಸಿ.ಕೆ ನಿರೂಪಿಸಿದರು. ಬಳಿಕ ಚಂದ್ರಕಾಂತ ಭಟ್ ಅಶ್ವತ್ಥಪುರ ಇವರಿಂದ ‘ಅಜಾಮಿಳನ ಚರಿತ್ರೆ’ ಹರಿಕಥೆ ನಡೆಯಿತು. ಹಿಮ್ಮೇಳದಲ್ಲಿ ಎಂ.ರಮೇಶ ಹೆಬ್ಬಾರ್ ಹಾಗೂ ಪ್ರದೀಪ ಉಪಾಧ್ಯಾಯ ಸಹಕರಿಸಿದರು.