ಬಂಟ್ವಾಳ: ಮೊಡಂಕಾಪಿನ ಸರಿದಂತರ ಪ್ರಕಾಶನ ಆಯೋಜಿಸಿದ ಜಲ ಜಾಗೃತಿ ಹಾಗೂ ಸರಿದಂತರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ‘ಅವನಿ ಧ್ವನಿ’ ಬಂಟ್ವಾಳದ ನಿವೃತ್ತ ಪ್ರಾಧ್ಯಾಪಕ ರಾಜಮಣಿ ರಾಮಕುಂಜ ಅವರ ಮನೆಯಲ್ಲಿ ನಡೆಯಿತು.

ಮಂಗಳೂರಿನ ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದಜೀ ಮಹಾರಾಜ್ ಮಾತನಾಡಿ, ಸ್ವಚ್ಛತೆಯ ಕುರಿತು ಚಿಂತನೆ ಮಾಡುವುದು ಮಾತ್ರವಲ್ಲದೇ, ಅದನ್ನು ಕಾರ್ಯರೂಪಕ್ಕೆ ತರಬೇಕು. ಪರಿಸರ ಹೋರಾಟ, ಸ್ವಚ್ಛತೆ ಹಾಗೂ ಪ್ಲಾಸ್ಟಿಕ್‍ನ ವಿರುದ್ಧ ನಡೆಯುತ್ತಿರುವ ಹೋರಾಟಗಳಲ್ಲಿ ಎಲ್ಲರೂ ಕೈಜೋಡಿಸಬೇಕು. ಎಲ್ಲರಲ್ಲೂ ಪರಿಸರ ಪ್ರಜ್ಞೆ ಮೂಡುವಂತಾಗಬೇಕು ಎಂದರು. ಇಂತಹ ಸಮಾಜಮುಖಿ ಕಾರ್ಯಕ್ರಮ ಆಯೋಜನೆ ಮಾಡಿರುವುದನ್ನು ಶ್ಲಾಘಿಸಿದರು.

ಉಪನ್ಯಾಸಕ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಕೃಷಿಯನ್ನು ಕಡೆಗಣಿಸಿ, ನಗರಕೇಂದ್ರಿತ  ಒಲವು ತೋರುತ್ತಿದ್ದಾರೆ. ನಮ್ಮ ಭೂಮಿಯನ್ನು ಮುಂದಿನ ಪೀಳಿಗೆಗೆ ಜೀವಿಸಲು ಯೋಗ್ಯವಾಗುವಂತೆ ಸಂರಕ್ಷಿಸಿ ಇಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೃಷಿ ತಜ್ಞರ ಬದಲು ಕೃಷಿಕರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಹೇಳಿದರು.

2020ನೇ ಸಾಲಿನ ಸರಿದಂತರ ಪ್ರಶಸ್ತಿಯನ್ನು ಸಮಾಜ ಸೇವಕರಾಗಿರುವ ಚಾರ್ಮಾಡಿ ಹಸನಬ್ಬ ಹಾಗೂ ಪರಿಸರ ಸೇವಕರಾಗಿರುವ ಮಾಧವ ಉಳ್ಳಾಲ್ ಇವರಿಗೆ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕಲಾವಿದ ದಿನೇಶ್ ಹೊಳ್ಳ ಉಪಸ್ಥಿತರಿದ್ದರು.

ಪ್ರಕಾಶನದ ಸಂಚಾಲಕ ರಾಜಮಣಿ ರಾಮಕುಂಜ ಸ್ವಾಗತಿಸಿ, ಧಾತ್ರಿ ವಂದಿಸಿದರು. ಮೇಧಾ, ಭಾರತಿ ಹಾಗೂ ಧನ್ಯ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.