ಬಂಟ್ವಾಳ: ರಾ.ಹೆ.ತುಂಬೆ ಸಮೀಪದ ವಳವೂರು ಎಂಬಲ್ಲಿ  ಸೋಮವಾರ ಮಧ್ಯಾಹ್ನದ ಹೊತ್ತಿಗೆ  ವನ್ಯ ಜೀವಿಗಳಾದ  ಜಿಂಕೆ ಮತ್ತು ಕೃಷ್ಣ ಮೃಗಗಳ ಕೊಂಬುಗಳನ್ನು ಮಾರಾಟಕ್ಕೆ ಯತ್ನಿಸುತ್ತಿರುವುದನ್ನು ಪತ್ತೆಹಚ್ಚಿರುವ ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರಿದಳ  ಮತ್ತು ಬಂಟ್ವಾಳ ಅರಣ್ಯ ಇಲಾಖಾಧಿಕಾರಿಗಳು ಈ ಸಂಬಂಧ  ಒರ್ವನನ್ನು    ಬಂಧಿಸಿದ್ದಾರೆ.  
 ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಉಜ್ಜೋಡಿ ನಿವಾಸಿ ಗಂಗಾದರ ಎಂಬವರ ಪುತ್ರ  ದಿಲೀಪ್ ಕುಮಾರ್ ಜಿ. (30)ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಕೃಷ್ಣ ಮೃಗದ ಎರಡು  ಹಾಗೂ ಜಿಂಕೆ ಮೃಗದ 4 ಕೊಂಬುಗಳು ಸಹಿತ ಒಟ್ಟು 6 ಕೊಂಬುಗಳು ಮತ್ತು 3 ಲಕ್ಷ ರೂ. ಮೌಲ್ಯದ ಕಾರನ್ನು ವಸಪಡಿಸಿಕೊಳ್ಳಲಾಗಿದೆ. 

ಆರೋಪಿ  ದಿಲೀಪ್  ಮಂಗಳೂರಿನಿಂದ  ಈ ಕೊಂಬುಗಳನ್ನು  ಮಾರಾಟ ಮಾಡುವ ಉದ್ದೇಶದಿಂದ   ಕಾರಿನಲ್ಲಿ ತುಂಬಿಸಿ   ಆಕ್ರಮವಾಗಿ ಬಿ.ಸಿ. ರೋಡು ಕಡೆಗೆ ಸಾಗಿಸುತ್ತಿದ್ದನೆನ್ನಲಾಗಿದೆ.

ಈ  ಬಗ್ಗೆ ಖಚಿತ ಮಾಹಿತಿ ಪಡೆದ  ಅರಣ್ಯ ಸಂಚಾರಿದಳ ಹಾಗು ಬಂಟ್ವಾಳ ಆರಣ್ಯಅಧಿಕಾರಿಗಳು ತುಂಬೆ ಗ್ರಾಮದ  ವಳವೂರು ಬಳಿ ಹೊಂಚು ಹಾಕಿ ನಿಂತಿದ್ದರು. 

 ಈ ವೇಳೆ ಬಂದ ಕಾರನ್ನು ಅನುಮಾನದಿಂದ ತಡೆದು ಪರಿಶೀಲಿಸಿದಾಗ ಆರು ಕೊಂಬುಗಳು ಪತ್ತೆಯಾಗಿದೆ.ತಕ್ಷಣ ಕಾರಿನಲ್ಲಿದ್ದಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇದನ್ನು ಮಾರಾಟಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ.ಕೂಡಲೇ ಆರೋಪಿಯನ್ನು ಬಂಧಿಸಿ ಕಾರು ಸಹಿತ ಕೊಂಬುಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆಗಾಗಿ  ಬಂಟ್ವಾಳ ವಲಯ ಅರಣ್ಯ ಇಲಾಖೆಗೆ  ಹಸ್ತಾಂತರಿಸಲಾಯಿತು.

. ಸಿ.ಐ.ಡಿ.ಅರಣ್ಯ ಘಟಕದ ಎ.ಡಿ.ಜಿ.ಪಿ ಡಾ!  ರವೀಂದ್ರ ನಾಥನ್ ಮತ್ತು ಸಿ.ಐ.ಡಿ.ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅದೀಕ್ಷಕರಾದ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರದ ಪಿ.ಎಸ್.ಐ ಪುರುಷೋತ್ತಮ ಈ ಕಾರ್ಯ ಚರಣೆ ನಡೆಸಿದ್ದರು. ಸಿಬ್ಬಂದಿ ಗಳಾದ ಜಗನ್ನಾಥ ಶೆಟ್ಟಿ, ಉದಯ ನಾಯ್ಕ, ಮಹೇಶ್, ದೇವರಾಜ್ , ಪ್ರವೀಣ್ ಸುಂದರ್ ಶೆಟ್ಟಿ ಹಾಗೂ ಬಂಟ್ವಾಳ ಅರಣ್ಯ ವಲಯ ಅಧಿಕಾರಿ ಸುರೇಶ್ ಸಿಬ್ಬಂದಿ ಗಳಾದ ಪ್ರೀತಂ, ವಿನಯ್, ಜಿತೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.