ದಕ್ಷಿಣ ಕನ್ನಡ:- "ಅತಿಥಿ ಶಿಕ್ಷಕರಾಗಿ ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಹಲವಾರು ಶಾಲೆಗಳ ಬೆನ್ನೆಲುಬಾಗಿ ನಿಂತಿದ್ದೇವೆ. ಅತಿಥಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಲ್ಲಿ ಹಗಲಿರುಳು ದುಡಿಯುತ್ತಾ ಸರ್ಕಾರಿ ಶಾಲೆಗಳ ಪ್ರಗತಿ ಹಾಗೂ ಗ್ರಾಮೀಣ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ. ಮಾನವೀಯತೆ ದೃಷ್ಟಿಯಿಂದ ಮತ್ತು ನೈತಿಕವಾಗಿಯೂ ಕೂಡಾ ಅತಿಥಿ ಶಿಕ್ಷಕರ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕೊರೋನಾ ಸಂಕಷ್ಟ ಮತ್ತು ಆರ್ಥಿಕ ಬಿಕ್ಕಟ್ಟುಗಳಿಂದಾಗಿ, ಉದ್ಯೋಗಗಳು ನಾಶವಾಗುತ್ತಿರುವ ಈ ದಿನಗಳಲ್ಲಿ ಸರಕಾರ ನಮ್ಮ ಬೆನ್ನಿಗೆ ನಿಲ್ಲಬೇಕಿದೆ".
"ಹಲವು ಬಾರಿ ಸರಿಯಾದ ಸಂಬಳವೂ ಇಲ್ಲದೆ, ಸೇವಾ ಭದ್ರತೆಯು ಇಲ್ಲದೆ ಸಂದಿಗ್ಧ ಪರಿಸ್ಥಿತಿ ನಮ್ಮದಾಗಿದೆ. ಇನ್ನು, ಈ ಕೋವಿಡ್ ಸಂದರ್ಭದಲ್ಲಿ ಶಾಲೆಗಳು ಮುಚ್ಚಿರುವ ಕಾರಣ ನಾವು ಇನ್ನಷ್ಟು ದುಸ್ಥಿತಿಗೆ ತಳಲ್ಪಟ್ಟಿದ್ದೇವೆ. ಮನೆಯ ಮೂಲಭೂತವಾದ ಅತ್ಯವಶ್ಯಕ ಪದಾರ್ಥಗಳನ್ನು ಖರೀದಿಸಲು ಆಗದಂತಹ ಆರ್ಥಿಕ ಮುಗ್ಗಟ್ಟಿನಲ್ಲಿದ್ದೇವೆ. ಬಹಳ ನೋವಿನ ಸಂಗತಿಯೆಂದರೆ, ಅನೇಕ 'ಅತಿಥಿ' ಶಿಕ್ಷಕರು ಶಿಕ್ಷಣೇತರ ಕೆಲಸಗಳಲ್ಲಿ ತೊಡಗುವ ದುಸ್ಥಿತಿ ಬಂದಿದೆ; ಇನ್ನು ನಿರುದ್ಯೋಗ ಹಾಗೂ ಹಸಿವಿನಿಂದ ತಪ್ಪಿಸಿಕೊಳ್ಳಲು ಕೆಲವು 'ಅತಿಥಿ' ಶಿಕ್ಷಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ ಅಸಾಧಾರಣ ಸಂದರ್ಭದಲ್ಲಿ ನೊಂದ ಶಿಕ್ಷಕ ಸಮುದಾಯಕ್ಕೆ ಕೋವಿಡ್ ವಿಶೇಷ ಆರ್ಥಿಕ ಪ್ಯಾಕೇಜನ್ನು ಘೋಷಿಸುವುದು ಅತ್ಯವಶ್ಯಕ ಹಾಗೂ ಮಾನವೀಯವಾದುದು".
"ಶಿಕ್ಷಕರನ್ನು ಖಾಯಂಗೊಳಿಸುವುದರಿಂದ ಸರ್ಕಾರಕ್ಕೆ ತಗಲುವ ಖರ್ಚಿನಿಂದ ತಪ್ಪಿಸಿಕೊಳ್ಳಲು ನಮ್ಮನ್ನು “ಅರೆಕಾಲಿಕ' | 'ಅತಿಥಿ' ಶಿಕ್ಷಕಕರು ಎಂದು ಕರೆಯುವ ಅಸಹ್ಯಕರ ಪದ್ಧತಿ ಚಾಲ್ತಿಯಲ್ಲಿರುವುದು ದುರಂತ. ಹೀಗಾಗಿ ನಮಗೆ ಸಂಬಳಕ್ಕೆ ಬದಲಿಗೆ ಕೇವಲ 'ಗೌರವಧನ' ನೀಡಲಾಗುತ್ತಿದೆ. ಸರ್ಕಾರಗಳ ಈ ನೀತಿಯಿಂದಾಗಿ "ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವ ನಮ್ಮ ಪ್ರಜಾತಾಂತ್ರಿಕ ಹಾಗೂ ಸಂವಿಧಾನದ ಹಕ್ಕಿನ ಹರಣವಾಗಿದೆ. ಕಾನೂನನ್ನು ಪಾಲಿಸಿ, ಸಂವಿಧಾನವನ್ನು ಎತ್ತಿಹಿಡಿಯಬೇಕಾದ ಸರ್ಕಾರಗಳೇ ಈ ನೆಲದ ಕಾನೂನನ್ನು ಗಾಳಿಗೆರಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.ಆದ್ದರಿಂದ ಮುಂದಿನ ನೇಮಕಾತಿಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರೆಕಾಲಿಕ/ಅತಿಥಿ ಶಿಕ್ಷಕರನ್ನೇ ಖಾಯಂ ಆಗಿ ನೇಮಕಾತಿ ಮಾದರಿಯಂತೆ ಅಥವಾ ಇನ್ನಿತರ ಇಲಾಖೆಗಳಲ್ಲಿ ಗುತ್ತಿಗೆ, ಅರೆಕಾಲಿಕ ಹಾಗೂ ಅತಿಥಿ ನೌಕರರನ್ನು ಖಾಯಂ ನೇಮಕಾತಿ ಮಾಡಿಕೊಳ್ಳುವಾಗ ಅನುಸರಿಸಿದ ಪ್ರಜಾತಾಂತ್ರಿಕ ರೂಢಿಗಳನ್ನು ಅನುಸರಿಸಿ ಅತಿಥಿ ಶಿಕ್ಷಕರನ್ನು ಕೂಡಾ ಖಾಯಂ ಮಾಡುವ ಪ್ರಕ್ರಿಯೆಯ ನಿರ್ಧಾರವನ್ನು ರಾಜ್ಯ ಸರ್ಕಾರವು ಈ ಕೂಡಲೇ ತೆಗೆದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ".
ಆಗ್ರಹಗಳು :
- ರಾಜ್ಯ ಸರ್ಕಾರ ಈ ಕೂಡಲೇ ಎಲ್ಲಾ ಅತಿಥಿ ಶಿಕ್ಷಕರಿಗೆ ಕೋವಿಡ್-19 ವಿಶೇಷ ಆರ್ಥಿಕ ಪ್ಯಾಕೇಜನ್ನು ಘೋಷಿಸಬೇಕು.
- ಮುಂಬರುವ ಎಲ್ಲಾ ನೇಮಕಾತಿಗಳಲ್ಲಿ ಅತಿಥಿ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಿ, ಅತಿಥಿ ಶಿಕ್ಷಕರನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಈ ಖಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅತಿಥಿ ಶಿಕ್ಷಕರಿಗೆ ನಿರ್ದಿಷ್ಟ ಕೋಟಾ ಕಾದಿರಿಸುವ/ವಿಶೇಷ ಅಂಕ (ವೇಟೇಜ್) ನೀಡುವ ಹಾಗೂ ವಯೋಮಿತಿ ಏರಿಸುವ ಹಾಗೂ ಇತ್ಯಾದಿ ಪ್ರಜಾತಾಂತ್ರಿಕ ಪದ್ಧತಿಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ತಕ್ಷಣವೇ ಸಚಿವ ಸಂಪುಟ ತೆಗೆದುಕೊಳ್ಳಬೇಕು.
- ಈಗಾಗಲೇ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಕೆಲಸದಿಂದ ತೆಗೆದು ಹಾಕದಂತೆ ಹಾಗೂ ಅವರೆಲ್ಲರಿಗೂ ಉದ್ಯೋಗ ಭದ್ರತೆ ನೀಡುವಂತಹ ಸೂಕ್ತ ಸರ್ಕಾರಿ ಆದೇಶವನ್ನು ಈ ಕೂಡಲೇ ಹೊರಡಿಸಿ.
- ಈ ಕೂಡಲೇ ಸರ್ಕಾರ ಅತಿಥಿ ಶಿಕ್ಷಕರ ಸಂಬಳವನ್ನು ಹೆಚ್ಚಿಸಬೇಕು, ವರ್ಷದ 12 ತಿಂಗಳು ಸಂಬಳ ನೀಡಬೇಕು ಮತ್ತು ಇದು ಪ್ರತಿ ತಿಂಗಳ ಮೊದಲ ವಾರದಲ್ಲಿ ಅತಿಥಿ ಶಿಕ್ಷಕರಿಗೆ ತಲುಪಬೇಕು.
- ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣ ಪತ್ರವನ್ನು ನೀಡಬೇಕು ಮತ್ತು ಗುರುತಿನ ಚೀಟಿಯನ್ನು ಕೊಡಬೇಕು.
- ಎಲ್ಲಾ ಅತಿಥಿ ಶಿಕ್ಷಕರಿಗೆ ಪಿ.ಎಫ್ ಮತ್ತು ಇ.ಎಸ್.ಐ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು.
"ಅತಿಥಿ ಶಿಕ್ಷಕರನ್ನು ಸರ್ಕಾರ ಕೂಡಲೇ ಖಾಯಂಗೊಳಿಸಿ ಸಂವಿಧಾನದ ಹಕ್ಕನ್ನು ಎತ್ತಿ ಹಿಡಿಯಬೇಕು, ಶಿಕ್ಷಣದ ಗುಣಮಟ್ಟವನ್ನು ಕಾಪಾಡಬೇಕು ಮತ್ತು ಶಿಕ್ಷಕ ಸಮುದಾಯದ ನಡುವೆ ಸಮಾನತೆಯನ್ನು ತರಲು ತಾವು ಮುಂದಾಗಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದು ಭರತಕುಮಾರ,(ಸಂಚಾಲಕರು, ಅತಿಥಿ ಶಿಕ್ಷಕರ ಹೋರಾಟ ಸಮಿತಿ ಕರ್ನಾಟಕ), ಪ್ರೋ, ಅಲ್ಲಮಪ್ರಭು ಬೆಟ್ಟದೂರು (ರಾಜ್ಯಾಧ್ಯಕ್ಷರು, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಕರ್ನಾಟಕ), ಚಂದ್ರಿಕಾ (ಅಧ್ಯಕ್ಷರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು), ಹಾಗೂ ಚಿತ್ರಲೇಖಾ ಕೆ (ಕಾರ್ಯದರ್ಶಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು), ತಿಳಿಸಿದ್ದಾರೆ.