ಉಡುಪಿ: ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ಮತದಾರರ ಪಾತ್ರ ಅತ್ಯಂತ ಮಹತ್ವವಾಗಿದ್ದು, 18 ವರ್ಷ ತುಂಬಿದ ಎಲ್ಲಾ ಮತದಾರರು ಚುನಾವಣೆಗಳಲ್ಲಿ ಮತದಾನ ಮಾಡಬೇಕು ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಷಿ ಹೇಳಿದ್ದಾರೆ.

ಅವರು ಶನಿವಾರ, ಉಡುಪಿಯ ಪುರಭವನದಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಉಡುಪಿ ಜಿಲ್ಲೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ,  18 ವರ್ಷದ ತುಂಬಿದ ಎಲ್ಲಾ ಪ್ರಜೆಗಳಿಗೆ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಬೇಕು, ಯುವ ಜನತೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು  ಜಾಗೃತ ಮತದಾರರಾಗಬೇಕು,  ಪ್ರತಿಯೊಬ್ಬರೂ  ಮತದಾನ ಮಾಡುವ ಮೂಲಕ ದೇಶದ ಏಳಿಗೆಯಲ್ಲಿ ಸಹಭಾಗಿಗಳಾಗಬೇಕು ಎಂದ ನ್ಯಾ.ಸಿ.ಎಂ. ಜೋಷಿ, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ  ಕಾರ್ಯದರ್ಶಿ ಕಾವೇರಿ ಮಾತನಾಡಿ, ಲಿಂಗ , ಧರ್ಮ ಸೇರಿದಂತೆ ಯಾವುದೇ ಭೇಧವಿಲ್ಲದೇ ಸಂವಿಧಾನ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದೆ, ವ್ಯವಸ್ಥೆಯ ಬಗ್ಗೆ ದೂಷಿಸದೇ ಅದರಲ್ಲಿ ಬದಲಾವಣೆ ತರಲು ಮತದಾನ ಮಾಡಬೇಕು, ವಿದ್ಯಾವಂತ ಜನತೆ ಮತದಾನ ಪ್ರಕ್ರಿಯೆಯಲ್ಲಿ ಹಿಂದುಳಿಯುತ್ತಿದ್ದು, ಪ್ರಜಾಪ್ರಭುತ್ವದ ಯಶಸ್ಸಿಗೆ ಎಲ್ಲಾ ಮತದಾರರು ಮತದಾನ ಮಾಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಅಧ್ಯಕ್ಷತೆ ವಹಿಸಿದ್ದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿದರು.

ಮೊದಲ ಬಾರಿ ಮತದಾರರಾಗಿ ನೊಂದಣಿಯಾದವರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು.

ಎಎಸ್ಪಿ ಕುಮಾರ ಚಂದ್ರ, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಡಾ.ಜಿ.ಶಂಕರ್ ಸರಕಾರಿ ಪ್ರ.ದ.ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ, ಜಿಲ್ಲಾ ಚುನಾವಣಾ ತಹಸೀಲ್ದಾರ್ ಆನಂದಪ್ಪ ನಾಯಕ್ ಉಪಸ್ಥಿತರಿದ್ದರು.

ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್ ಸ್ವಾಗತಿಸಿದರು.

2019 ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಬಿಎಲ್.ಓ ಗಳಾದ ಅನುಸೂಯಾ, ಗೋಪಾಲ್ ಮತ್ತು ಉಮಾವತಿ ಅವರನ್ನು ಸನ್ಮಾನಿಸಲಾಯಿತು.